ಗಣೇಶ ಚತುರ್ಥಿಯೆಂದರೆ (Ganesh Chaturthi) ಸಾಕು, ಮನೆ ತುಂಬೆಲ್ಲ ಸಂಭ್ರಮ ಹೆಚ್ಚಾಗಿರುತ್ತದೆ. ಬಾಗಿಲಿಗೆ ಮಾವಿನ ತೋರಣ, ಮನೆಯೊಳಗೆ ಮೋದಕದ ಪರಿಮಳದ ಜೊತೆಗೆ ಪೂಜಾ ಕೋಣೆಯಲ್ಲಿ ಗಣಪತಿಯ ಪೀಠದ ಮುಂದೆ ಬಿಡಿಸುವ ರಂಗೋಲಿ ಇಡೀ ಪರಿಸರಕ್ಕೆ ದೈವಿಕ ಕಳೆ ತರುತ್ತದೆ.
ಹಬ್ಬದ ದಿನದ ಧಾವಂತದಲ್ಲಿ ತೀರ ಕ್ಲಿಷ್ಟಕರವಾದ ರಂಗೋಲಿಗಳನ್ನು (Rangoli) ಬಿಡಿಸಲು ಸಮಯ ಸಾಲದು. ಕಡಿಮೆ ಸಮಯದಲ್ಲಿ, ಅಷ್ಟೇ ಸುಂದರವಾಗಿ ಮೂಡಿಬರುವ ಚುಕ್ಕಿಯಿಲ್ಲದ ರಂಗೋಲಿಗಳ ವಿವರ ಇಲ್ಲಿದೆ.
ರಂಗೋಲಿ-1

ನೆಲದ ಮೇಲೆ ಮಧ್ಯಮ ಗಾತ್ರದ ಒಂದು ವೃತ್ತವನ್ನು (ಪ್ಲೇಟ್ ಅಥವಾ ದಾರದ ಸಹಾಯದಿಂದ) ಗುರುತಿಸಿ, ಅದರ ಒಳಗೆ ಕಿತ್ತಳೆ (ಅಥವಾ ಕೆಂಪು) ಬಣ್ಣವನ್ನು ಸಮವಾಗಿ ಹರಡಿ. ಬಿಳಿ ರಂಗೋಲಿ ಪುಡಿಯಿಂದ ಮಧ್ಯದಲ್ಲಿ ಸರಳ ರೇಖೆಗಳ ಮೂಲಕ ಗಣೇಶನ ಮುಖ, ಕಿವಿ ಹಾಗೂ ಸೊಂಡಿಲನ್ನು ಬಿಡಿಸಿ. ವೃತ್ತದ ಸುತ್ತಲೂ ಹಳದಿ ಮತ್ತು ಬಿಳಿ ಬಣ್ಣದಲ್ಲಿ ಪುಟ್ಟ ಹೂವಿನ ದಳಗಳ ವಿನ್ಯಾಸ ಮಾಡಿ, ಅಂಚಿನಲ್ಲಿ ಸಣ್ಣ ಹಸಿರು ಚುಕ್ಕೆಗಳನ್ನು ಇಡಿ. ಸುತ್ತಲೂ ಪುಟ್ಟ ಹಣತೆಗಳನ್ನು ಇಟ್ಟರೆ ರಂಗೋಲಿ ಕಂಗೊಳಿಸುತ್ತದೆ.
ರಂಗೋಲಿ-2

ಮೊದಲು ನೆಲದ ಮೇಲೆ ಅರಳಿ ಎಲೆ ಅಥವಾ ವೀಳ್ಯದೆಲೆಯ ಆಕಾರವನ್ನು ಬಿಳಿ ಪುಡಿಯಿಂದ ಬರೆದು, ಒಳಗೆ ಹಸಿರು ಬಣ್ಣವನ್ನು ತುಂಬಿ. ಹಸಿರು ಬಣ್ಣದ ಹಿನ್ನೆಲೆಯ ಮೇಲೆ ಹಳದಿ ಅಥವಾ ಬಿಳಿ ಬಣ್ಣದ ರೇಖೆಗಳಿಂದ ಗಣೇಶನ ಸರಳ ರೂಪವನ್ನು ಬಿಡಿಸಿ, ಹಣೆ ಮೇಲೆ ಕುಂಕುಮದ ತಿಲಕವಿಡಿ. ಎಲೆಯ ಅಂಚಿನಲ್ಲಿ ಬಿಳಿ ರಂಗೋಲಿಯಿಂದ ಸಣ್ಣ ಮುತ್ತಿನಂತಹ ಚುಕ್ಕೆಗಳನ್ನು ಹಾಕಿ ಬಾರ್ಡರ್ ಮಾಡಿ.
ರಂಗೋಲಿ-3

ನೆಲದ ಮೇಲೆ ಹಳದಿ ಬಣ್ಣದ ವೃತ್ತಾಕಾರದ ಹಿನ್ನೆಲೆಯನ್ನು ರಚಿಸಿ. ಮಧ್ಯದಲ್ಲಿ ॐ ಆಕಾರವನ್ನು ಬರೆಯುತ್ತಲೇ, ಅದನ್ನು ಗಣೇಶನ ಸೊಂಡಿಲು ಮತ್ತು ಮುಖದ ಆಕಾರಕ್ಕೆ ತಿರುಗಿಸಿ ಬಿಳಿ ಹಾಗೂ ಕೆಂಪು ಗೆರೆಗಳಿಂದ ಸುಲಭವಾಗಿ ಬಿಡಿಸಿ. ವೃತ್ತದ ಸುತ್ತಲೂ ನೇರಳೆ ಅಥವಾ ಕೆಂಪು ಬಣ್ಣದ ಸಣ್ಣ ಚುಕ್ಕೆಗಳನ್ನು ಬಿಡಿಸಿ, ಚಿತ್ರದಲ್ಲಿರುವಂತೆ ಸುತ್ತಲೂ ದಪ್ಪ ಚುಕ್ಕೆಗಳನ್ನು ಇಡಿ
ರಂಗೋಲಿ 4:

ಮಧ್ಯದಲ್ಲಿ ಒಂದು ಸಣ್ಣ ವೃತ್ತ ರಚಿಸಿ, ಅದರ ಸುತ್ತಲೂ ಗುಲಾಬಿ ಬಣ್ಣದ ಕಮಲದ ದಳಗಳನ್ನು ಬಿಡಿಸಿ. ದಳಗಳ ಅಂಚನ್ನು ಬಿಳಿ ರಂಗೋಲಿಯಿಂದ ತೆಳುವಾಗಿ ಔಟ್‌ಲೈನ್ ಮಾಡಿ. ಮಧ್ಯದ ಜಾಗದಲ್ಲಿ ಹಳದಿ ಬಣ್ಣ ತುಂಬಿ, ಅದರ ಮೇಲೆ ಕುಂಕುಮ ಮತ್ತು ಅರಶಿಣ ಪುಡಿಯಿಂದ ಗಣೇಶನ ಮುಖದ ರೇಖಾಚಿತ್ರವನ್ನು ರಚಿಸಿ. ಚಿತ್ರದಲ್ಲಿ ತೋರಿಸಿದಂತೆ ಸುತ್ತಲೂ ಗೆರೆ ಎಳೆದು ಚಂದಗೊಳಿಸಿ

