ತುಮಕೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ(KN Rajanna) ಅವರಿಗೆ ಅಪೆಕ್ಸ್ ಬ್ಯಾಂಕ್ (APEX Bank) ಅಧ್ಯಕ್ಷ ಸ್ಥಾನ ತಪ್ಪಿರುವ ವಿಚಾರವಾಗಿ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ (MLC) ಆರ್. ರಾಜೇಂದ್ರ (Rajendra) ಕಾಂಗ್ರೆಸ್ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ತಂದೆಯ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ಪಕ್ಷದೊಳಗೆ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಂದ್ರ, ಯಾವುದೇ ಬಲವಾದ ಕಾರಣವಿಲ್ಲದಿದ್ದರೂ ಕೆ.ಎನ್. ರಾಜಣ್ಣ ಅವರನ್ನು ಈ ಹಿಂದೆ ಸಚಿವ ಸ್ಥಾನದಿಂದ ಕೈಬಿಡಲಾಯಿತು. ನೂತನ ಸಂಪುಟ ರಚನೆ ವೇಳೆ ಸ್ಥಾನ ಸಿಗುವ ಭರವಸೆ ಇತ್ತಾದರೂ ಅದೂ ಹುಸಿಯಾಯಿತು. ಕೊನೆಗೆ ಸಿದ್ದರಾಮಯ್ಯನವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿ ಸಾಕಷ್ಟು ಪ್ರಯತ್ನವನ್ನೂ ಮಾಡಿದ್ದರು. ಆದರೆ ಕೆಲವರ ಸ್ವಜನಪಕ್ಷಪಾತ ಹಾಗೂ ಕಾಣದ ಕೈಗಳ ವ್ಯವಸ್ಥಿತ ಪಿತೂರಿಯಿಂದಾಗಿ ಆ ಹುದ್ದೆಯೂ ತಪ್ಪಿಹೋಗಿದೆ. ಬದಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣದ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಒಲಿದಿದೆ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಡಿಕೆಶಿ ಆಪ್ತ ಎಂಎಲ್‌ಸಿ ರವಿ ಆಯ್ಕೆ – ಸಿದ್ದು ಆಪ್ತ ರಾಜಣ್ಣಗೆ ನಿರಾಸೆ
ಪಕ್ಷದಲ್ಲಿ ಕೆ.ಎನ್. ರಾಜಣ್ಣ ಅವರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಇದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ. ಈ ಹಿಂದೆ ರಾಜಣ್ಣರನ್ನು ಕಡೆಗಣಿಸಿದ ಪರಿಣಾಮವಾಗಿ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಎದುರಿಸಿದ ನಷ್ಟ ಎಲ್ಲರಿಗೂ ತಿಳಿದಿದೆ. ಈಗಲೂ ಅದೇ ರೀತಿ ಮುಂದುವರಿದರೆ ಪಕ್ಷ ಮತ್ತೆ ಅದೇ ರೀತಿಯ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಬಿ. ನಾಗೇಂದ್ರ ಅವರ ತೆರವಾದ ಸ್ಥಾನದ ಕುರಿತು ಮಾತನಾಡಿದ ಅವರು, ನಾಗೇಂದ್ರ ಅವರ ಸಚಿವ ಸ್ಥಾನವನ್ನು ಕೆ.ಎನ್. ರಾಜಣ್ಣ ಅವರಿಗೆ ನೀಡಿ ಎಂದು ನಾವು ಕೇಳುತ್ತಿಲ್ಲ. ಆ ಎಸ್‌ಟಿ (ST) ಮೀಸಲಾತಿ ಕೋಟಾದ ಸಚಿವ ಸ್ಥಾನವನ್ನು ಸಮುದಾಯದ ಇತರ ಯಾವುದೇ ಅರ್ಹ ಎಸ್‌ಟಿ ನಾಯಕರಿಗೆ ನೀಡಲಿ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (HD Devegowda) ನಿವಾಸಕ್ಕೆ ತಾವು ನೀಡಿದ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿ, ಅದು ಕೇವಲ ಸೌಹಾರ್ದಯುತ ಭೇಟಿಯಷ್ಟೇ ಆಗಿತ್ತು. ಆ ಭೇಟಿಗೆ ಯಾವುದೇ ರಾಜಕೀಯ ಬಣ್ಣ ಕಟ್ಟುವ ಅಗತ್ಯವಿಲ್ಲ ಎಂದು ತಿಳಿಸಿದರು.

