– ಜೈಲಲ್ಲೇ ವ್ಯವಸ್ಥೆ ಮಾಡಬಹುದು, ಕೋರ್ಟ್ಗೆ ಬಂದರೆ ಜನದಟ್ಟಣೆ ತಡೆಯುವುದು ಕಷ್ಟ ಎಂದ ಜಡ್ಜ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಅನ್ನು ಸೆಷನ್ಸ್ ಕೋರ್ಟ್ ಈಗಾಗಲೇ ಟ್ರಯಲ್ ನಡೆಸುತ್ತಿದೆ. ಸೆಷನ್ ಕೋರ್ಟ್ ವಜಾಗೊಳಿಸಿದ್ದ ವಿಚಾರಣೆಗೆ ಖುದ್ದು ಹಾಜರಾಗಬೇಕೆಂಬ ದರ್ಶನ್ ಅರ್ಜಿ ಈಗ ಹೈಕೋರ್ಟ್ನಲ್ಲಿದ್ದು (High Court), ಸೆ.16ಕ್ಕೆ ವಿಚಾರಣೆ ಮುಂದೂಡಿದೆ.
ಖುದ್ದು ಹಾಜರಾತಿ ಬಗ್ಗೆ ದರ್ಶನ್ (Actor Darshan) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು (ಸೆ.10) ವಿಚಾರಣೆ ನಡೆಸಿತು. ನ್ಯಾ.ವಿ.ಶ್ರೀಶಾನಂದ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ಖುದ್ದು ಹಾಜರಾತಿಗೆ ಅವಕಾಶ ನೀಡಬೇಕು. ತಾಂತ್ರಿಕ ಕಾರಣಕ್ಕೆ ಸೂಕ್ತ ಸಂವಹನ ಸಾಧ್ಯವಾಗ್ತಿಲ್ಲ, ಮುಖ್ಯ ಸಾಕ್ಷಿಗಳ ವಿಚಾರಣೆ ವೇಳೆಯಲ್ಲಾದರೂ ಆರೋಪಿಗಳನ್ನು ಹಾಜರಿಡಬೇಕು ಅಂತಾ ವಾದಿಸಿದರು.ಇದನ್ನೂ ಓದಿ: ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ ಆರಂಭ – ಯಡಿಯೂರಪ್ಪ, ಜೋಶಿ ಸೇರಿ ಅನೇಕ ಗಣ್ಯರು ಭಾಗಿ
ಈ ವೇಳೆ ನ್ಯಾಯಾಧೀಶರು, ನಿಮ್ಮ ಕಕ್ಷಿದಾರರೊಂದಿಗೆ ಮಾತನಾಡುವುದು ಎಲ್ಲರಿಗೂ ಕೇಳುತ್ತದೆಂಬುದು ನಿಮ್ಮ ಆಕ್ಷೇಪವಿರಬಹುದು. ವಿಡಿಯೋ ಕಾನ್ಫರೆನ್ಸ್ನಲ್ಲೇ ಖಾಸಗಿತನದ ಮಾತುಕತೆಗೆ ವ್ಯವಸ್ಥೆ ಮಾಡಿಕೊಡುತ್ತೇವೆ. ಕೋರ್ಟ್ ಕಲಾಪಕ್ಕೆ 15 ನಿಮಿಷ ಮುನ್ನ ಮಾತನಾಡಿ, ಕೋರ್ಟ್ ಕರೆತರಬೇಕೆಂದರೆ ಪೊಲೀಸರ ಭದ್ರತೆ ಕೊಡಬೇಕು. ಜನದಟ್ಟಣೆ ಆಗದಂತೆ ತಡೆಯುವುದು ಕಷ್ಟ ಎಂದಿದ್ದಾರೆ.
ಬೇಕಿದ್ದರೆ ಪರಪ್ಪನ ಅಗ್ರಹಾರದಲ್ಲೇ ಕೋರ್ಟ್ ವ್ಯವಸ್ಥೆ ಮಾಡಬಹುದು. ಅಲ್ಲೇ ವಿಚಾರಣೆ ಮಾಡಲು ಸೂಚನೆ ಕೊಡಬಹುದು. ಖುದ್ದಾಗಿ ಹಾಜರಾಗುವುದಕ್ಕಿಂತ ವಿಸಿಯಲ್ಲಿಯೇ ಚೆನ್ನಾಗಿ ಕೇಳುತ್ತದೆ. ಸೌಹಾರ್ದಯುತವಾಗಿ ಟ್ರಯಲ್ ಮುಗಿಸಬೇಕು. ಎರಡೂ ಕಡೆ ವಕೀಲರು ಚರ್ಚಿಸಿ, ಒಂದು ತೀರ್ಮಾನಕ್ಕೆ ಬನ್ನಿ. ಪ್ರತಿ ವಿಚಾರಣೆಗೆ ಆರೋಪಿಗಳ ಖುದ್ದು ಹಾಜರು ಅಗತ್ಯವಿಲ್ಲ. ಕ್ರಾಸ್ ಎಗ್ಸಾಮಿನೇಷನ್ ಯಾವಾಗ ಎಂದು ಕೋರ್ಟ್ಗೆ ತಿಳಿಸಿ ಎಂದು ಸೂಚಿಸಿ, ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿದ್ದಾರೆ.ಇದನ್ನೂ ಓದಿ: ಕುತೂಹಲಕ್ಕೆ ತೆರೆ – ಭಾರತಕ್ಕೆ ಕ್ಸಿ ಜಿನ್ಪಿಂಗ್ ಭೇಟಿ ಖಚಿತಪಡಿಸಿದ ಚೀನಾ
ದರ್ಶನ್ ಅರ್ಜಿಯಲ್ಲಿ ಏನಿದೆ?
ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾತಿಗೆ ಅವಕಾಶ ಕೊಡಬೇಕು. ಸಾಕ್ಷ್ಯ ವಿಚಾರಣೆ ಆಲಿಸುವುದು, ವೀಕ್ಷಿಸುವುದು ತಮ್ಮ ಹಕ್ಕು. ಆರೋಪಿಯ ಸಮಕ್ಷಮದಲ್ಲಿ ಸಾಕ್ಷಿ ತನ್ನ ಹೇಳಿಕೆಯನ್ನು ನೀಡಬೇಕು. ವಕೀಲರೊಂದಿಗೆ ಆರೋಪಿ ನೇರ ಸಂವಹನಕ್ಕೆ ಸೂಕ್ತ ವ್ಯವಸ್ಥೆಗಳಿಲ್ಲ. ಪರಪ್ಪನ ಅಗ್ರಹಾರ ಜೈಲು ಹಾಗೂ ಕೋರ್ಟ್ನಲ್ಲಿ ಸೂಕ್ತ ಉಪಕರಣಗಳಿಲ್ಲ. ತಾಂತ್ರಿಕ ಉಪಕರಣಗಳನ್ನು ಇನ್ನೂ ಉನ್ನತೀಕರಿಸಲಾಗಿಲ್ಲ. ಕಾಲಕಾಲಕ್ಕೆ ತನ್ನ ವಕೀಲರಿಗೆ ಸೂಚನೆಗಳನ್ನು ನೀಡಲಾಗುತ್ತಿಲ್ಲ. ವಿಡಿಯೋ ಕಾನ್ಫ್ರೆನ್ಸ್ನಲ್ಲಿ ತಾಂತ್ರಿಕ ಅಡಚಣೆಗಳಿವೆ. ಹೀಗಾಗಿ ಖುದ್ದು ಹಾಜರಿಗೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ಸೆಷನ್ ಕೋರ್ಟ್ನಲ್ಲಿ ವಜಾಗೊಂಡ ಬೆನ್ನಲ್ಲೇ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.ಇದನ್ನೂ ಓದಿ: ಪ್ಯಾರ್ ಚಿತ್ರಕ್ಕಾಗಿ ಟ್ಯಾಬ್ಲೋ ಪ್ರಚಾರ – ರವಿಚಂದ್ರನ್ ವಿಶೇಷ ಪಾತ್ರದ ಸಿನಿಮಾ

