ಕಾರವಾರ: ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಯಾಡಿ, ಅವುಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಸಂಚಾರಿ ದಳ ಭೇದಿಸಿ ಇಬ್ಬರನ್ನ ಬಂಧಿಸಿದೆ.
ಯಲ್ಲಾಪುರ ತಾಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ವನ್ಯಜೀವಿ ಉತ್ಪನ್ನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕುರಿತು ಮಾಹಿತಿ ಪಡೆದು ಶಿರಸಿ ವಿಭಾಗದ ಅರಣ್ಯ ಸಂಚಾರಿ ದಳದ ತಂಡ ದಾಳಿ ನಡೆಸಿತು. ಯಲ್ಲಾಪುರದ ಶಂಕರ್ ಸಿದ್ದಿ, ನರಸಿಂಹ ಸಿದ್ದಿ ಬಂಧಿತರು.
ಬಂಧಿತರಿಂದ ಸುಮಾರು 15.748 ಕೆಜಿ ಪ್ಯಾಂಗೋಲಿನ್ (ಚಿಪ್ಪುಹಂದಿ) ಚಿಪ್ಪುಗಳು, 8 ಹುಲಿ ಉಗುರುಗಳು, 12 ಚಿರತೆ ಉಗುರುಗಳು, 2 ಹುಲಿ ಹಲ್ಲುಗಳು, 3 ಚಿರತೆ ಹಲ್ಲುಗಳು, 6 ಕಾಡುಹಂದಿ ಹಲ್ಲುಗಳು ಹಾಗೂ 2 ಕಾಡೆಮ್ಮೆ ಕೊಂಬುಗಳು ಸೇರಿ ಕೃತ್ಯಕ್ಕೆ ಬಳಸಲಾದ ಒಂದು ಬೈಕ್ ಮತ್ತು ಸ್ಕೂಟರ್ ಅನ್ನು ಅಧಿಕಾರಿಗಳು ಜಪ್ತಿ ಪಡಿಸಿದ್ದಾರೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಅಕ್ರಮ ವನ್ಯಜೀವಿ ವ್ಯಾಪಾರ ಜಾಲದ ಮೂಲ, ಎಲ್ಲಿಗೆ ಸಾಗಾಟವಾಗುತ್ತಿದೆ ಹಾಗೂ ಇದರಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಪತ್ತೆಗೆ ತನಿಖೆ ಚುರುಕುಗೊಂಡಿದೆ.
ಕೃತ್ಯದಲ್ಲಿ ಭಾಗಿಯಾಗಿರುವ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಅಪರಾಧ ನಿಯಂತ್ರಣ ಘಟಕದ ಎಪಿಸಿಸಿಎಫ್ ಮನೋಜ್ ತ್ರಿಪಾಠಿ ಹಾಗೂ ಡಿಸಿಎಫ್ ಸಂದೀಪ್ ಸೂರ್ಯವಂಶಿ ಮಾರ್ಗದರ್ಶನದಲ್ಲಿ, ಎಸಿಎಫ್ ರಾಘವೇಂದ್ರ ನಾಯಕ್ ಮತ್ತು ಆರ್ಎಫ್ಒ ಶಿಲ್ಪಾ ನಾಯಕ್ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ದರು.
