ಚಾಮರಾಜನಗರ: ಕಾವೇರಿ ವನ್ಯಧಾಮದ ಹೊಳೆ ಮುರಿದಟ್ಟಿ ಕರಿಕಲ್ಲು ಗುಡ್ಡದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ, ವಾಚರ್‌ಗಳಾದ ಶಿವಲಿಂಗ ನಾಯ್ಕ ಮತ್ತು ಗಿರೀಶ್ ಅವರಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಕೊಳ್ಳೇಗಾಲದಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹೊಳೆ ಮುರಿದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮರಿಯಮಂಗಲ ಗ್ರಾಮದ ಅಂತೋಣಿಸ್ವಾಮಿ, ಲಾಸರ್ ದೊಡ್ಡಿ ಗ್ರಾಮದ ಡೇವಿಡ್ ಕುಮಾರ್ ಮತ್ತು ಜಗನ್ನಾಥ್ ದೊಡ್ಡಿ ಗ್ರಾಮದ ಜಾನ್ ರೋಸ್ ಪೀಟರ್ ಎಂಬವರು ಮೃತಪಟ್ಟಿದ್ದರು. ಗುಂಡು ಹಾರಿಸಿದ್ದಾರೆ ಎನ್ನಲಾದ ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ, ವಾಚರ್‌ಗಳಾದ ಶಿವಲಿಂಗ ನಾಯ್ಕ, ಗಿರೀಶ್ ಹಾಗೂ ಇತರ ಸಿಬ್ಬಂದಿಯನ್ನು ಸಿಐಡಿ ಎಸ್‌ಪಿ ಉಮಾ ಪ್ರಶಾಂತ್ ವಿಚಾರಣೆಗೆ ಒಳಪಡಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಕೆಲವೊಂದು ಷರತ್ತು ವಿಧಿಸಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಷರತ್ತುಗಳೇನು?
ಪ್ರತಿವಾದಿ ಪೊಲೀಸರು ದಾಖಲಿಸಿರುವ ಅಪರಾಧ ಸಂಖ್ಯೆ 166/2026 ರ ಸಂಬಂಧವಾಗಿ, ಅರ್ಜಿದಾರರನ್ನು ಬಂಧಿಸಿದರೆ ಅವರನ್ನು ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪ್ರತಿವಾದಿ ಪೊಲೀಸರಿಗೆ ನಿರ್ದೇಶಿಸಲಾಗಿದೆ:
1. ಅರ್ಜಿದಾರರು ಈ ಆದೇಶದ ದಿನಾಂಕದಿಂದ 25 ದಿನಗಳೊಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಹಾಗೆ ಹಾಜರಾದಾಗ, ತನಿಖಾಧಿಕಾರಿಯು ತಲಾ 1,00,000 ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಒಬ್ಬ ಜಾಮೀನುದಾರರನ್ನು ಪಡೆದುಕೊಂಡು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು.
2. ತನಿಖೆಯ ಸಮಯದಲ್ಲಿ ಅರ್ಜಿದಾರರು ತನಿಖಾಧಿಕಾರಿಗೆ ಸಹಕರಿಸಬೇಕು.
3. ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವವರೆಗೆ, ಅರ್ಜಿದಾರರು ಪ್ರತಿ ಶನಿವಾರದಂದು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಹಾಜರಾತಿಯನ್ನು ದಾಖಲಿಸಬೇಕು.
4. ಅರ್ಜಿದಾರರು ಸಾಕ್ಷಿಗಳಿಗೆ ಅಥವಾ ಈ ಪ್ರಕರಣದ ಸತ್ಯಾಂಶಗಳ ಅರಿವಿರುವ ಯಾವುದೇ ವ್ಯಕ್ತಿಗೆ, ನ್ಯಾಯಾಲಯ ಅಥವಾ ತನಿಖಾಧಿಕಾರಿಯ ಮುಂದೆ ಸತ್ಯಾಂಶಗಳನ್ನು ಬಹಿರಂಗಪಡಿಸದಂತೆ ತಡೆಯಲು, ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ಪ್ರಚೋದನೆ, ಬೆದರಿಕೆ, ಭರವಸೆ ಅಥವಾ ಪ್ರಭಾವವನ್ನು ಬೀರಬಾರದು ಮತ್ತು ಸಾಕ್ಷ್ಯವನ್ನು ತಿರುಚಬಾರದು.
5. ಬಾಂಡ್ ಬರೆದುಕೊಡುವ ಸಮಯದಲ್ಲಿ, ಅರ್ಜಿದಾರರು ಈ ಅರ್ಜಿಯ ಶೀರ್ಷಿಕೆಯಲ್ಲಿ ನಮೂದಿಸಲಾದ ತಮ್ಮ ವಾಸಸ್ಥಳದ ವಿಳಾಸದ ದೃಢೀಕೃತ ಪುರಾವೆಯನ್ನು ತನಿಖಾಧಿಕಾರಿಯ ಮುಂದೆ ಹಾಜರುಪಡಿಸಬೇಕು.
ಈ ಮೇಲ್ಕಂಡ ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಅರಣ್ಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
