ಬೆಂಗಳೂರು.. (Bengaluru) ಎಷ್ಟೋ ಜನರಿಗೆ ಬದುಕು ಕೊಟ್ಟ ಊರು. ಇಲ್ಲಿಗೆ ಬರುವ ಒಬ್ಬೊಬ್ಬರದ್ದು ಒಂದೊಂದು ಕತೆ. ಅದೆಷ್ಟೋ ಕತೆಗಳು ಖುಷಿಯಿಂದ ಕೂಡಿದ್ದರೆ, ಇನ್ನೆಷ್ಟೋ ಕತೆಗಳು ನೋವಿಂದಲೇ ಕೂಡಿರುತ್ತವೆ. ಆ ನೋವು, ಖುಷಿ ಎರಡೂ ಕತೆಗಳನ್ನು ಬೆಂಗಳೂರು ಕಳೆದು ಅವರಿಗೆಲ್ಲ ಒಂದು ಬದುಕು (Life) ಕೊಟ್ಟಿರುತ್ತದೆ.
ಮೊನ್ನೆ ಟೀ ಅಂಗಡಿಯಲ್ಲಿ ಚಹಾ ಕೊಟ್ಟ ಹುಡುಗ ಸ್ನೇಹಿತನಿಗೆ ಹೇಳ್ತಿದ್ದ . ಬಯ್ಯ.. ಕಡಿಮೆ ಮಾರ್ಕ್ಸ್ ಬಂತು ಅಂತ ಹತ್ತನೇ ಕ್ಲಾಸ್‌ಗೆ ಊರು ಬಿಟ್ಬಿಟ್ಟೆ. ರಹೀಮ್ ಬಯ್ಯನ ಟೀ ಶಾಪಲ್ಲಿ ಕೆಲಸ ಮಾಡ್ತಿದ್ದೆ. ಸುಮಾರು ಆರೇಳು ವರ್ಷ ಆಗಿತ್ತು.. ರಹೀಮ್ ಬಯ್ಯ ಹೋದ್ಮೇಲೆ ನಂದೇ ಅಂಗಡಿ ಮಾಡ್ಬಿಟ್ಟೆ. ವರ್ಕೌಟ್ ಆಯ್ತು. ಈಗ ಆ ಹಬ್ಬ ಈ ಹಬ್ಬ ಅಂತ ಇದ್ದಾಗೆಲ್ಲ ಊರಿಗೆ ಹೋಗಿ ಬರ್ತೀನಿ ಏನೋ ಲೈಫ್ ಒಂದು ಹಂತಕ್ಕೆ ಸೆಟ್ಲ್ ಆಗಿದೆ ಅಂದ.
ಹಾಗೇ ವಾಪಸ್ ಆಗುವಾಗ ಈ ಮಾತೆಲ್ಲ ಕೇಳಿಸಿಕೊಂಡಿದ್ದ, ವಿನಯ್ ಮಾತು ಶುರು ಮಾಡಿದ. ಇವತ್ತಿಗೆ ಒಂದವರೆ ವರ್ಷ ಆಗ್ತಾ ಬಂತು ಬೆಂಗಳೂರಿಗೆ ಬಂದು. ಬ್ರೇಕಪ್ ಆದ್ಮೇಲೆ, ಅವಳ ಮುಖ ನೋಡಲೇಬಾರದು ಅಂತ ಊರು ಬಿಟ್ಟು ಬಂದೆ. ಈ ಕಾರಣ ನಿನ್ನ ಬಿಟ್ಟು ಬೇರೇ ಯಾರಿಗೂ ಗೊತ್ತಿಲ್ಲ. ಇಲ್ಲಿ ಬಂದು ಏನು ಕೆಲಸ ಮಾಡ್ಬೇಕು ಅಂತಾನೂ ನನಗೆ ಗೊತ್ತಿರಲಿಲ್ಲ. ಫ್ರೆಂಡ್‌ಗೆ ಹೇಳಿದ್ದೆ ಬರ್ತಿದಿನಿ, ಎಲ್ಲಾದ್ರೂ ಕೆಲಸ ಇದ್ರೆ ನೋಡು ಅಂತ. ಅವನು ನೀನ್ಯಾಕೆ ತಲೆ ಕೆಡ್ಸೋತಿಯಾ? ಓದಿದವರಿಗೆ ಒಂದೇ ಕೆಲಸ, ಓದದೇ ಇರೋರಿಗೆ ಮಾಡಿದ್ದೆಲ್ಲ ಕೆಲಸ ಅಂದಿದ್ದ. ಅದು ಹೌದು ಅಂತ ಬಂದವನು ಏನೋ ಲೈಫ್‌ಲ್ಲಿ ಅವಳು ನೆನಪೇ ಆಗದಷ್ಟು ಬ್ಯುಸಿ ಆಗ್ಬಿಟ್ಟೆ! ಮೊದಲೆಲ್ಲ ಅವಳು ನೆನಪಾಗ್ತಿತ್ತು. ಈಗ ಆ ತರ ಏನಿಲ್ಲ..!
ಒಮ್ಮೆ ಕ್ಯಾಬ್ (Cab) ಬುಕ್ ಮಾಡ್ಕೊಂಡು ಹೋಗುವಾಗ ಹೀಗೆ ಮಾತಿಗಿಳಿದ ಕ್ಯಾಬ್ ಡ್ರೈವರ್, ಬ್ರದರ್ ಯಾವ ಊರು ಅಂದ, ನಾನು ಶಿವಮೊಗ್ಗ (Shivamogga) ಅಂದೆ. ನಿಮ್ದು ಯಾವ ಊರು ಬ್ರದರ್ ಅಂದೆ, ನಂದು ಮಂಡ್ಯ ಬ್ರದರ್, ಇಲ್ಲಿಗೆ ಬಂದು ಸುಮಾರು 8 ವರ್ಷ ಆಯ್ತು. ನಮ್ಮ ಅಣ್ಣ ಅತ್ಗೆ ಊರಲ್ಲಿ ಇದಾರೆ. ಮನೆ, ಆಸ್ತಿ ಎಲ್ಲಾ ಅವರೇ ಬೇಕು ಅಂದ್ರು, ಬಿಟ್ಬಂದ್ಬಿಟ್ಟೆ ಬ್ರದರ್ ಅಂದ. ಇಲ್ಲಿ ಹೇಗಿದೆ ಕೆಲಸ? ದುಡಿಮೆ ಎಷ್ಟಾಗುತ್ತೆ ಅಂದೆ. ದಿನಕ್ಕೆ 2000 -3000 ಆಗುತ್ತೆ ಬ್ರದರ್. ಆರಾಮಾಗಿ ಇದಿನಿ ಅಂದ.

ಹೀಗೆ ದಿನ ಬೆಳಗಾದ್ರೆ ಎಷ್ಟೋ ಜನ ಬೆಂಗಳೂರಿಗೆ ಮೊದಲನೇ ದಿನ ಬರ್ತಾರೆ. ಇನ್ನೆಷ್ಟೋ ಜನ ಇನ್ನೂ ವಾಪಸ್ ಬೆಂಗ್ಳೂರಿಗೆ ಬರಲ್ಲ ಅಂತ ಹೋಗ್ತಾರೆ. ಇದರ ನಡುವೆ ಇಲ್ಲೇ ನಿಂತು ಲಕ್ಷಾಂತರ ಮಂದಿ ಬದುಕನ್ನ ಕಟ್ಕೋತಾರೆ. ಹಾಗೆ ಎಲ್ಲವನ್ನೂ ಬಿಟ್ಟು ಬಂದವರನ್ನು ಬೆಂಗಳೂರು ಹೀಗೆ ತಬ್ಬಿಕೊಳ್ಳುತ್ತದೆ ಅಲ್ವಾ?
ಬೆಂಗಳೂರು ಒಂದು ಹೊಸ ಪ್ರಪಂಚ!
ಬೆಂಗಳೂರಿಗೆ ಕಾಲಿಟ್ಟಾಗ ಅದು ಕೇವಲ ಒಂದು ನಗರವಾಗಿ ಕಾಣಿಸುವುದಿಲ್ಲ. ಇಲ್ಲಿ ಬರುವ ಪ್ರತಿಯೊಬ್ಬರಿಗೂ ತನ್ನದೇ ಆದ ಒಂದು ಕಥೆ ಹುಟ್ಟಿಕೊಳ್ಳುತ್ತದೆ. ಉದ್ಯೋಗದ ಕನಸನ್ನು ಹೊತ್ತು ಬಂದವನಿಗೆ ಅವಕಾಶದ ಬಾಗಿಲು ತೆರೆಯುತ್ತದೆ. ವಿದ್ಯಾಭ್ಯಾಸಕ್ಕಾಗಿ ಬಂದವನಿಗೆ ಹೊಸ ಜಗತ್ತು ಪರಿಚಯವಾಗುತ್ತದೆ. ಬದುಕಿನಲ್ಲಿ ಹೊಸ ಆರಂಭ ಹುಡುಕಿಕೊಂಡು ಬಂದವನಿಗೆ ಬೆಂಗಳೂರು ನಿಧಾನವಾಗಿ ತನ್ನ ಮಡಿಲಲ್ಲಿ ಜಾಗ ಮಾಡಿಕೊಡುತ್ತದೆ.

ಬೆಳಗಿನ ಜಾವ ರಸ್ತೆಯಲ್ಲಿ ಓಡುವ ವಾಹನಗಳ ಸದ್ದು, ಪಕ್ಕದ ಹೋಟೆಲ್‌ನಿಂದ ಬರುವ ತಿಂಡಿಯ ಘಮ, ಉದ್ಯಾನವನಗಳಲ್ಲಿ ನಡೆಯುವ ಜನರು, ಮೆಟ್ರೋ ರೈಲಿನ ವೇಗ, ಕಚೇರಿಗಳತ್ತ ಧಾವಿಸುವ ಯುವಜನತೆ, ಇವೆಲ್ಲ ಸೇರಿ ಬೆಂಗಳೂರಿನ ಪ್ರತಿದಿನದ ಚಿತ್ರವನ್ನು ಬಿಡಿಸುತ್ತವೆ.
ಬೆಂಗಳೂರಿನ ಆತ್ಮ
ಒಂದು ಕಾಲದಲ್ಲಿ ತಂಪಾದ ವಾತಾವರಣ, ಮರಗಳ ಸಾಲು ಮತ್ತು ಕೆರೆಗಳಿಂದ ಪ್ರಸಿದ್ಧವಾಗಿದ್ದ ಬೆಂಗಳೂರು ಇಂದು ತಂತ್ರಜ್ಞಾನ ಲೋಕದ ಪ್ರಮುಖ ನಗರವಾಗಿದೆ. ಆದರೂ ನಗರದ ಹಳೆಯ ನೆನಪುಗಳು ಇನ್ನೂ ಅಲ್ಲಲ್ಲಿ ಜೀವಂತವಾಗಿವೆ. ಬಸವನಗುಡಿಯ ಬೀದಿಗಳಲ್ಲಿ, ಮಲ್ಲೇಶ್ವರದ ಹಳೆಯ ಅಂಗಡಿಗಳಲ್ಲಿ, ಲಾಲ್‌ಬಾಗ್‌ನ (Lalbagh) ಹಸಿರಿನಲ್ಲಿ ಬೆಂಗಳೂರಿನ ಆತ್ಮವನ್ನು ಕಾಣಬಹುದು!

ಬೆಂಗಳೂರು ನನ್ನೂರು!
ನೀನು ಎಲ್ಲಿಂದ ಬಂದೆ ಎಂದು ಬೆಂಗಳೂರು ಯಾರನ್ನೂ ಕೇಳುವುದಿಲ್ಲ. ಬೇರೆ ಬೇರೆ ಊರು, ಭಾಷೆ, ಸಂಸ್ಕೃತಿಯಿಂದ ಬಂದವರನ್ನೆಲ್ಲ ತನ್ನೊಳಗೆ ಬೆಂಗಳೂರು ಸೇರಿಸಿಕೊಳ್ಳುತ್ತದೆ. ಇಲ್ಲಿ ಪರಿಚಯವಿಲ್ಲದೆ ಬಂದವರು ಸ್ನೇಹಿತರಾಗುತ್ತಾರೆ. ಅಪರಿಚಿತ ಬೀದಿಗಳು ಪರಿಚಿತವಾಗುತ್ತವೆ.
ಈ ನಗರದ ವೇಗದ ಬದುಕಿನ ನಡುವೆ ಒತ್ತಡವೂ ಇದೆ, ಟ್ರಾಫಿಕ್‌ನ ಕಿರಿಕಿರಿಯೂ ಇದೆ, ಕಾಂಕ್ರೀಟ್ ಕಾಡಿನ ನೋವೂ ಇದೆ. ಆದರೂ ಸಂಜೆ ಬೀಸುವ ತಂಪಾದ ಗಾಳಿ, ಮಳೆಯ ನಂತರದ ಮಣ್ಣಿನ ಪರಿಮಳ, ರಸ್ತೆ ಬದಿಯ ಚಹಾ ಮತ್ತು ಸ್ನೇಹಿತರ ಜೊತೆಗಿನ ಮಾತುಕತೆ ಎಲ್ಲಾ ಇಷ್ಟವಾಗುತ್ತಾ ಈ ನಗರವೇ ಸ್ವಂತ ಊರಿನಂತೆ ಭಾಸವಾಗುತ್ತದೆ!
ಇದು ನಿರಂತರ
ಈ ಕತೆಗಳು ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ. ನಾಳೆ ಬೆಳಗ್ಗೆ, ನಾಡಿದ್ದು ಹೀಗೆ ನಿರಂತರವಾಗಿ..! ನಾಳೆಯೂ ಯಾರೋ ನೂರಾರು ಕನಸುಗಳನ್ನು ಕಟ್ಟಿಕೊಂಡೋ, ಊರಲ್ಲಿ ಎಲ್ಲಾ ಸೋತೋ ಮೆಜೆಸ್ಟಿಕ್‌ನಲ್ಲಿ ಮೊಟ್ಟ ಮೊದಲಬಾರಿಗೆ ಕಾಲಿಡುತ್ತಾನೆ. ಅವನಿಗೆ ನಾನ್ಯಾಕೆ ಬಂದ್ನೋ ಇಲ್ಲಿಗೆ ಅಂತ ಅನ್ನಿಸಲೂ ಬಹುದು! ಹೀಗೆ ಅನ್ನಿಸುವಾಗಲೇ ಅವನಿಗೆ ಬೆಂಗಳೂರಿನ ಕೈ ಅವನನ್ನು ಹಿಡಿದು ಇಲ್ಲಿಯೇ ಉಳಿಸಿಕೊಳ್ಳುತ್ತದೆ. ಹೀಗೆ ಅವನು ಕಟ್ಟಿಕೊಂಡು ಬಂದ ಕನಸಿಗೆ ಒಂದು ದಾರಿಯನ್ನೂ ಈ ಊರು ತೋರಿಸುತ್ತದೆ.
ನನಗೆ ಎಷ್ಟೋ ಸಲ ಎಲ್ಲಿಂದಲೋ ಬಂದು ಮೆಜೆಸ್ಟಿಕ್‌ಲ್ಲಿ ಬಸ್, ರೈಲು ಇಳಿಯೋರನ್ನ ನೋಡಿದಾಗೆಲ್ಲ, ಇವರೆಲ್ಲ ಯಾರು? ಕೈಯಲ್ಲಿ ಸರಿಯಾಗಿ ಒಂದು ಬ್ಯಾಗ್ ಕೂಡ ಇಲ್ಲ. ಹಳೆ ಬಟ್ಟೆಯಲ್ಲಿ ಬಂದಿದಾರೆ. ಇವರೆಲ್ಲ ಎಲ್ಲಿಗೆ ಹೋಗ್ತಾರೋ ಏನೋ ಅನ್ಸಿದಾಗೆಲ್ಲ, ನನ್ನ ಸ್ನೇಹಿತನ ಡೈಲಾಗ್ ನೆನಪಾಗುತ್ತೆ.. ಯಾರ‍್ಯಾರಿಗೋ ಲೈಫ್ ಕೊಟ್ಟ ಬೆಂಗಳೂರು ನಮಗೆ ಕೊಡಲ್ವಾ ಅಂತ..! ಹೀಗೆ ಬೆಂಗಳೂರು ಕೆಲಸ ಮಾಡೋರನ್ನ ಖಂಡಿತಾ ತನ್ನವರನ್ನಾಗಿ ಮಾಡ್ಕೋಬಿಡುತ್ತೆ.
