ಶಿವಮೊಗ್ಗ: ಜಿಲ್ಲೆಯ ರಿಪ್ಪನ್ ಪೇಟೆ (Ripponpet) ಸಮೀಪದ ಜಂಬಳ್ಳಿ- ಶಿವಪುರ ಅರಣ್ಯ ಪ್ರದೇಶದಲ್ಲಿ ಕುಡುಮಲ್ಲಿಗೆ ಸೊಸೈಟಿ (Kudumallige Society) ಸಿಇಒ (CEO) ನಿಗೂಢವಾಗಿ ನಾಪತ್ತೆಯಾದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇತ್ತೀಚಿಗೆ ಸೊಸೈಟಿಯಲ್ಲಿ ಆರ್ಥಿಕ ಅವ್ಯವಹಾರದ ಆರೋಪ ಕೇಳಿಬಂದ ಬೆನ್ನಲ್ಲೇ ನಿಗೂಢವಾಗಿ ಕಣ್ಮರೆಯಾಗಿದ್ದ ಸಿಇಓ, ಕುಟುಂಬದ ನೆನಪಾಗಿ ತಾನೇ ಕ್ಯಾಬ್ ಮಾಡಿಕೊಂಡು ವಾಪಸ್ ಮನೆಗೆ ಬಂದಿದ್ದಾರೆ. ಹೀಗಾಗಿ ಪ್ರಕರಣ ಸುಖಾಂತ್ಯಗೊಂಡಿದೆ.
ಹೌದು, ಶಿವಮೊಗ್ಗದ (Shivamogga) ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸೊಸೈಟಿಯಲ್ಲಿ ಅವ್ಯವಹಾರದ ಆರೋಪಗಳಿಂದ ತೀವ್ರ ನೊಂದಿದ್ದ ಸಿಇಒ ಮದನ್, ಶುಕ್ರವಾರ ಮನೆಯಿಂದ ಕಾರಿನಲ್ಲಿ ಹೊರಟು ಮರಳಿ ಮನೆಗೆ ಹೋಗಿರಲಿಲ್ಲ. ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಗ್ರಾ.ಪಂ ವ್ಯಾಪ್ತಿಯ ಜಂಬಳ್ಳಿ- ಶಿವಪುರ ಅರಣ್ಯ ಪ್ರದೇಶದಲ್ಲಿ ಕಾರನ್ನ ಬಿಟ್ಟು ನಾಪತ್ತೆಯಾಗಿದ್ದರು. ಹತ್ತಾರು ಕಡೆ ಹುಡುಕಿದ್ದ ಕುಟುಂಬಸ್ಥರು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದರು. ಇದನ್ನೂ ಓದಿ: ಕೊಡಗಿನಲ್ಲಿ ವಿದೇಶಿ ಹಣ್ಣುಗಳ ಕೃಷಿಗೆ ಹೊಸ ಹೆಜ್ಜೆ – ಲಾಂಗಾನ್, ರಾಂಬುಟಾನ್, ಲಿಚ್ಚಿ ಬೆಳೆಯತ್ತ ರೈತರ ಚಿತ್ತ
ಹೀಗೆ ಪೊಲೀಸರು ತಮ್ಮ ಶೋಧ ಆರಂಭಿಸಿದರ ನಡುವೆಯೇ ಭಟ್ಕಳದ ಹಾದಿ ಹಿಡಿದಿದ್ದ ಸಿಇಒ ಮದನ್ ಮರಳಿ ಮನೆಗೆ ಬಂದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಅಂದಹಾಗೆ ಜಂಬಳ್ಳಿ ಅರಣ್ಯ ಪ್ರದೇಶದಲ್ಲಿ ಕಾರನ್ನ ಬಿಟ್ಟಿದ್ದ ಸಿಇಒ ಮದನ್, ಅಲ್ಲಿಂದ ನೇರವಾಗಿ ರಿಪ್ಪನಪೇಟೆ ಸಮೀಪದ ಅರಸಾಳು ರೈಲ್ವೆ ಸ್ಟೇಷನ್‌ಗೆ ಬಂದಿದ್ದು, ಟ್ರೈನ್ ಮೂಲಕ ತಾಳಗುಪ್ಪವರೆಗೆ ಹೋಗಿದ್ದಾರೆ. ಅಲ್ಲಿಂದ ಬಸ್ ಮೂಲಕ ಭಟ್ಕಳಕ್ಕೆ ತೆರಳಿ, ಒಂದು ದಿನಗಳ ಕಾಲ ಅಲ್ಲಿಯೇ ಸುತ್ತಾಡಿದ್ದಾರೆ. ಈ ನಡುವೆ ಮನೆಯ ನೆನಪಾಗಿದ್ದು, ಬೇರೊಬ್ಬರ ಫೋನ್ ಮೂಲಕ ಮನೆಗೆ ಕರೆ ಮಾಡಿ, ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ. ಮನೆಯವರು ವಾಪಸ್ ಬರುವಂತೆ ಹೇಳಿದ ಬಳಿಕ ಕ್ಯಾಬ್ ಮಾಡಿಕೊಂಡು ಭಟ್ಕಳದಿಂದ ಹೊರಟು, ಭಾನುವಾರ ರಾತ್ರಿ ವೇಳೆಗೆ ಮನೆಗೆ ಬಂದಿದ್ದಾರೆ. ಹೀಗಾಗಿ ಕುಟುಂಬಸ್ಥರ ಜೊತೆ ಕುಡುಮಲ್ಲಿಗೆ ಸೊಸೈಟಿಯ ಅಧ್ಯಕ್ಷರು- ಪದಾಧಿಕಾರಿಗಳು, ನಿರ್ದೇಶಕರುಗಳು ಒಮ್ಮೆಲೆ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಗೊಂದಲದ ಗೂಡಾದ SIR ಪ್ರಕ್ರಿಯೆ – ಅಧಿಕಾರಿಗಳಿಗೆ ಸಾರ್ವಜನಿಕರಿಂದ ಕ್ಲಾಸ್
ಇನ್ನು ಕೆಲ ತಿಂಗಳ ಹಿಂದೆಯಷ್ಟೇ ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದ ಆರೋಪ ಕೇಳಿಬಂದಿದ್ದವು. ಲೆಕ್ಕ ಪರಿಶೋಧನೆ ವೇಳೆ ಸುಮಾರು 25 ಲಕ್ಷ ರೂ.ನಷ್ಟು ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ ಸಿಇಒಗೆ ಹಣವನ್ನ ಮರಳಿ ಭರಿಸುವಂತೆ ಸೊಸೈಟಿಯ ನಿರ್ದೇಶಕರು ಒತ್ತಡ ಹೇರಿದ್ದರು ಎನ್ನಲಾಗಿದೆ. ಇದರಲ್ಲಿ 6 ಲಕ್ಷದಷ್ಟು ಹಣವನ್ನ ಸಿಇಒ ಮದನ್ ಭರಿಸಿದ್ದರು. ಉಳಿದ ಹಣವನ್ನ ಕೂಡ ಭರಿಸಬೇಕು ಎಂಬ ಒತ್ತಡವಿದ್ದ ಕಾರಣಕ್ಕೆ ಮನನೊಂದಿದ್ದ ಸಿಇಒ ಮದನ್, ಹೊಸನಗರದ ಜಂಬಳ್ಳಿ ಅರಣ್ಯದಲ್ಲಿ ಕಾರನ್ನ ಬಿಟ್ಟು ನಾಪತ್ತೆಯಾಗಿದ್ದರು. ಅದರಲ್ಲೂ ಕಾರಿನೊಳಗೆ ಮೊಬೈಲ್, ಕಾರಿನ ಕೀ, ಸೊಸೈಟಿಯ ದಾಖಲೆಗಳನ್ನ ಬಿಟ್ಟು ಹೋಗಿದ್ದರಿಂದ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಫಸ್ಟ್ ಟೈಮ್ – ಪಾಕಿಸ್ತಾನಕ್ಕೆ ಕ್ರೀಡಾಪಟುಗಳನ್ನ ಕಳಿಸಲು ಭಾರತ ಒಪ್ಪಿಗೆ?
ಹೀಗಾಗಿ ಅರಣ್ಯ ವ್ಯಾಪ್ತಿಯಲ್ಲಿ ಪೊಲೀಸರ ಜೊತೆ ಕುಟುಂಬಸ್ಥರು, ಸ್ಥಳೀಯರು ಕೂಡ ಶೋಧ ನಡೆಸಿದ್ದರು. ಈ ನಡುವೆ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾದ ಕಾರಣಕ್ಕೆ ಪೊಲೀಸರು ಶೋಧವನ್ನ ಮತ್ತಷ್ಟು ತೀವ್ರಗೊಳಿಸಿ, ಅಕ್ಕಪಕ್ಕದ ಜಿಲ್ಲೆಗಳಿಗೂ ಫೋಟೋ ಸಮೇತ ಮಾಹಿತಿ ರವಾನಿಸಿದ್ದರು. ಈ ನಡುವೆ ತೀರ್ಥಹಳ್ಳಿ ಪೊಲೀಸರಿಗೆ ಸಿಇಒ ಮದನ್ ಭಟ್ಕಳದಲ್ಲಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಅಲರ್ಟ್ ಆಗಿದ್ದ ಪೊಲೀಸರು ಮತ್ತೋಮ್ಮೆ ಫೋಟೋ ಕಳಿಸಿ, ಆತ ನಿಜವಾಗಿಯೂ ಸಿಇಒ ಮದನ್ ಎಂಬುದನ್ನ ಖಚಿತ ಪಡಿಸಿಕೊಂಡಿದ್ದರು. ಇನ್ನೇನು ಅವರನ್ನು ಸ್ಥಳೀಯ ಪೊಲೀಸರ ಮೂಲಕ ಸಂಪರ್ಕ ಸಾಧಿಸಬೇಕು ಎನ್ನುವ ಹೊತ್ತಿಗೆ ಮದನ್ ಸ್ವಲ್ಪದರಲ್ಲೇ ಮಿಸ್ ಆಗಿದ್ದರು. ಈ ನಡುವೆ ಸೊಸೈಟಿ ವಿಚಾರಕ್ಕೆ ನನ್ನನ್ನ ಪೊಲೀಸರು ಹುಡುಕುತ್ತಿದ್ದಾರೆ ಎಂದು ಗಾಬರಿಯಿಂದ ಮದನ್ ಮನೆಗೆ ಕಾಲ್ ಮಾಡಿ, ಮಾತನಾಡಿದ್ದಾರೆ. ತೀರ್ಥಹಳ್ಳಿ ಪೊಲೀಸರು ಮದನ್‌ಗಾಗಿ ಭಟ್ಕಳದತ್ತ ಹೊರಟು, ಆಗುಂಬೆ ತಲುಪುವುದರಲ್ಲೇ, ಮದನ್ ಮನೆಗೆ ಬರುತ್ತಿರುವ ವಿಷಯ ತಿಳಿದು, ವಾಪಸ್ ಆಗಿದ್ದಾರೆ. ಇದಾದ ಕೆಲವೇ ಸಮಯಕ್ಕೆ ಸಿಇಒ ಮದನ್ ಕೂಡ ಕ್ಯಾಬ್ ಮಾಡಿಕೊಂಡು ಮನೆಗೆ ಬಂದು, ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ SIR ನೋಟಿಸ್ ನೀಡಿ ಕ್ಷಮೆ ಕೇಳಿದ ಅಧಿಕಾರಿ
