ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಕನಸಿನ ಲಾಲ್ಬಾಗ್ ಸುರಂಗ ಮಾರ್ಗ ಯೋಜನೆ ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ 16.5 ಕಿಮೀ ಉದ್ದದ ಸುರಂಗ ಯೋಜನೆಗೆ ಸರ್ಕಾರ ಟೆಂಡರ್ ಕರೆದಿದೆ.
ಆದ್ರೆ, ಐಐಎಸ್ಸಿ ಬಳಿಕ ಭಾರತೀಯ ಭೂ ವೈಜ್ಞಾನಿಕ ಸಂಸ್ಥೆ (GIS) ಕೂಡ ಸುರಂಗ ಯೋಜನೆ ಲಾಲ್ಬಾಗ್ಗೆ ಮಾರಕ ಅಂತ ವರದಿ ಸಿದ್ಧಪಡಿಸಿದೆ. ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ 27 ಪುಟಗಳ ವರದಿಯಲ್ಲಿ ಈ ಜಿಐಎಸ್ ವರದಿಯನ್ನ ಕೂಡ ಉಲ್ಲೇಖಿಸಲಾಗಿದೆ.

ಸುಮಾರು 300 ಕೋಟಿ ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಪೆನಿನ್ಸುಲರ್ ಗ್ನೈಸ್ ಬಂಡೆಯ ಕೆಳಭಾಗದಲ್ಲೇ ಸುರಂಗ ಹಾದುಹೋಗಲಿದೆ. ಟನಲ್ ಬೋರಿಂಗ್ ಮೆಷಿನ್ ಬಳಸಿ ಕೊರೆಯುವಾಗ ಉಂಟಾಗುವ ತೀವ್ರ ಕಂಪನದಿಂದಾಗಿ ಬಂಡೆಯಲ್ಲಿ ಹೊಸ ಬಿರುಕುಗಳು ಮೂಡಬಹುದು. ಜೊತೆಗೆ ಇರುವ ಬಿರುಕುಗಳು ಮತ್ತಷ್ಟು ದೊಡ್ಡದಾಗಬಹುದು ಅಂತ ಜಿಐಎಸ್ ಹೇಳಿದೆ. ಬಂಡೆ ಅಷ್ಟೇ ಅಲ್ಲದೇ ಐತಿಹಾಸಿಕ ಕೆಂಪೇಗೌಡ ಕಾವಲು ಗೋಪುರಕ್ಕೂ ಹಾನಿ ಆಗುವ ಸಾಧ್ಯತೆ ಇದೆ.
ಡಿಪಿಎಆರ್ ಪ್ರಕಾರ ಸುರಂಗದ ಆಳವು 40 ಮೀಟರ್ ಆಳವಿರಲಿದ್ದು ಗಟ್ಟಿಯಾದ ಗ್ರಾನೈಟ್ ಶಿಲೆ ಎದುರಾಗುವ ಸಾಧ್ಯತೆ ಇದೆ. ವ್ಯಾಪಕವಾದ ಕೊರೆಯುವಿಕೆ ಮತ್ತು ಸ್ಫೋಟಕ ಬಳಕೆಯ ಅಗತ್ಯ ಉಂಟಾಗಬಹುದು. ಲಾಲ್ಬಾಗ್ ಕೆರೆಯ ಸಮೀಪದಲ್ಲಿ ಹಾದುಹೋಗುವುದರಿಂದ ಅಂತರ್ಜಲದ ಪರಿಣಾಮ ಬಗ್ಗೆ ಕೂಡ ಸಂಸ್ಥೆ ಎಚ್ಚರಿಸಿದೆ.
