– ಮೂರು ಸಶಸ್ತ್ರ ಪಡೆಗಳಿಗೆ ಆನೆಬಲ
ನವದೆಹಲಿ: ಆಪರೇಷನ್ ಸಿಂಧೂರ ಬಳಿಕ ಭಾರತ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇಂದು ಮಹತ್ವದ ಪ್ರಸ್ತಾವೆನೆಗೆ ಅನುಮೋದನೆ ನೀಡಲಾಗಿದೆ. ಸಚಿವ ರಾಜನಾಥ್ ಸಿಂಗ್ (Rajnath Singh) ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (DAC) ಸಭೆಯಲ್ಲಿ, ಸುಮಾರು 1.10 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಹೌದು. ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮೂರು ಸಶಸ್ತ್ರ ಪಡೆಗಳಿಗೆ ಅಗತ್ಯ ರಕ್ಷಣಾ ಉತ್ಪನ್ನಗಳನ್ನು ಖರೀದಿಸುವ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: 34 ಧ್ರುವ್ ಹೆಲಿಕಾಪ್ಟರ್‌ಗಳ ಖರೀದಿಗೆ ಸಂಪುಟ ಅಸ್ತು – ಭಾರತೀಯ ಸೇನೆಗೆ ಮತ್ತಷ್ಟು ಬಲ
ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಸ್ವಾವಲಂಬನೆ ಬಲಪಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷವೆಂದರೆ ಈ ಅನುಮೋದಿತ ಪ್ರಸ್ತಾವನೆಯಲ್ಲಿ ಶೇ.98 ರಷ್ಟು ಉತ್ಪನ್ನಗಳನ್ನ ಭಾರತೀಯ ಉದ್ಯಮದಿಂದಲೇ ಖರೀದಿ ಮಾಡಲಾಗುತ್ತದೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ್ ಭಾರತ್’ (ಸ್ವಾವಲಂಬಿ ಭಾರತ) ಉಪಕ್ರಮಗಳಿಗೆ ಸಿಕ್ಕ ಉತ್ತೇಜನವಾಗಿದೆ.

ಭಾರತೀಯ ಸೇನೆಗೆ ಏನು?
ಅನುಮೋದಿತ ಪಟ್ಟಿಯಲ್ಲಿ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು (CBRN) ವಿಚಕ್ಷಣ ವಾಹನಗಳು, ಉನ್ನತ ಚಲನಶೀಲ ವಾಹನಗಳು (HMV), ಸ್ವಯಂ ಚಾಲಿತ ಮೆಕ್ಯಾನಿಕಲ್ ಮೈನ್ ಲೇಯರ್‌ಗಳು (MMLs), ಸುಧಾರಿತ ಲಘು ಹೆಲಿಕಾಪ್ಟರ್‌ಗಳು (ALHs), ಟ್ರಾಲ್ ಟ್ಯಾಂಕ್‌ಗಳು ಮತ್ತು ಸರ್ವತ್ರ ಸೇತುವೆ ವ್ಯವಸ್ಥೆ ಸೇರಿವೆ. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ
ಹೈ ಮೊಬಿಲಿಟಿ ವೆಹಿಕಲ್ಸ್ ಸವಾಲಿನ ಭೂಪ್ರದೇಶಗಳಲ್ಲಿ ಕಾರ್ಯಾಚರಣೆಯ ಸಾಮರ್ಥ್ಯ, ಲಾಜಿಸ್ಟಿಕಲ್ ಬೆಂಬಲ ಮತ್ತು ಚಲನಶೀಲತೆ ಹೆಚ್ಚಿಸುತ್ತವೆ. ಸ್ವಯಂ ಚಾಲಿತ ಮೆಕ್ಯಾನಿಕಲ್ ಮೈನ್ ಲೇಯರ್‌ಗಳು ಸಂದಿಗ್ಧ ಭೂಪ್ರದೇಶಗಳಲ್ಲಿ ತ್ವರಿತ ಮತ್ತು ಪರಿಣಾಮಕಾರಿ ಗಣಿ ಹಾಕುವ ಸಾಮರ್ಥ್ಯ ಒದಗಿಸುತ್ತವೆ. ಹಾಗೆಯೇ ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಎಲ್ಲಾ ಭೂಪ್ರದೇಶಗಳು ಮತ್ತು ಸೈನ್ಯ ಮತ್ತು ವಾಯುಪಡೆ ಎರಡಕ್ಕೂ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಸಂಕೀರ್ಣ ಕಾರ್ಯಾಚರಣೆ ನಿರ್ವಹಿಸುತ್ತವೆ. ಟ್ರಾಲ್ ಟ್ಯಾಂಕ್‌ಗಳು ಮತ್ತು ಸರ್ವತ್ರ ಸೇತುವೆ ವ್ಯವಸ್ಥೆಯು ವೈವಿಧ್ಯಮಯ ಭೂಪ್ರದೇಶಗಳಲ್ಲಿ ಪರಿಸ್ಥಿತಿ ಎದುರಿಸಲು ಸಹಕಾರಿಯಾಗಲಿವೆ.

ಭಾರತೀಯ ನೌಕಾಪಡೆಗೆ ಏನು?
ಇನ್ನೂ ಭಾರತೀಯ ನೌಕಾಪಡೆಗೆ, ಡಿಎಸಿ ಅರುಧ್ರ ರೆಡಾರ್‌ಗಳ ಖರೀದಿಗೆ ಒಪ್ಪಿಗೆ ಸೂಚಿಸಲಾಗಿದೆ. ನಂತರ ಮೆರೈನ್ ಗ್ಯಾಸ್ ಟರ್ಬೈನ್‌ಗಳ (MGT) ಖರೀದಿಗೂ ಅನುಮೋದಿಸಲಾಗಿದೆ. ಜೊತೆಗೆ ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆ ಕಡಿಮೆ ಮಾಡುವ ಗುರಿಯನ್ನೂ ಹೊಂದಿದೆ. ಇದನ್ನೂ ಓದಿ: ಭಾರತದ ಮೇಲೆ ಪಾಕ್ ಹಾರಿಸಿದ್ದ ಅತ್ಯಾಧುನಿಕ AMRAAM ಮಿಸೈಲ್ ಟರ್ಕಿಗೆ ಪೂರೈಸಲು ಅಮೆರಿಕ ಡೀಲ್!
ವಾಯುಪಡೆಗೆ ಏನು ಸಿಗಲಿದೇ?
ಭಾರತೀಯ ವಾಯುಪಡೆಯು ತನ್ನ ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಯುದ್ಧ ಸಾಮರ್ಥ್ಯ ಸುಧಾರಿಸುವ ಗುರಿ ಹೊಂದಿರುವ ಹಲವಾರು ಪ್ರಸ್ತಾವನೆಗಳಿಗೆ ಅನುಮೋದನೆ ಪಡೆದುಕೊಂಡಿದೆ. ಭೂ-ಆಧಾರಿತ ಬಹುಪಯೋಗಿ ಜಾಮರ್‌ಗಳ (GBMPJs) ಖರೀದಿ ಮತ್ತು ರಕ್ಷಣಾ ಪಡೆಗಳ ಸುರಕ್ಷಿತ ಪ್ರವೇಶ ಕಾರ್ಡ್ (DEFSAC) ವ್ಯವಸ್ಥೆಯ ಸ್ಥಾಪನೆಗೆ DAC ಅನುಮೋದನೆ ನೀಡಿದೆ. ಶತ್ರುರಾಷ್ಟ್ರಗಳ ಸೇನೆಯ ರೆಡಾರ್‌ಗಳನ್ನ ಎದುರಿಸಲು ಹಾಗೂ ರೆಡಾರ್ ದಿಕ್ಕುತಪ್ಪಿಸಲು GBMPJ ಜಾಮರ್‌ಗಳನ್ನ ಬಳಸಲಾಗುತ್ತದೆ.
ಒಟ್ಟಿನಲ್ಲಿ ಡಿಎಡಿ ಅನುಮೋದಿಸಿದ ಒಟ್ಟು ರಕ್ಷಣಾ ಉತ್ಪನ್ನಗಳ ಖರೀದಿ ಪ್ರಸ್ತಾವನೆಯಲ್ಲಿ ದೇಶೀಯ ಉದ್ಯಮವು 98% ರಷ್ಟಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

