ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಆಪ್ತ ವಲಯ ಛಿದ್ರವಾಗುತ್ತಿದೆಯೇ ಎಂಬ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶಕ್ಕೆ ಸಿದ್ದರಾಮಯ್ಯ ಅವರ ಪರಮ ಆಪ್ತರಾದ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಹಾಗೂ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ(HC Mahadevappa) ಗೈರಾಗಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ರಜತ ಮಹೋತ್ಸವ ಹಾಗೂ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಈ ಇಬ್ಬರೂ ಪ್ರಮುಖ ನಾಯಕರು ಕಾಣಿಸಿಕೊಳ್ಳದಿರುವುದು ತೀವ್ರ ಕುತೂಹಲ ಮೂಡಿಸಿದೆ.

2005ರಲ್ಲಿ ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರನ್ನು ಒಗ್ಗೂಡಿಸಿ ರಾಜ್ಯಾದ್ಯಂತ ಬೃಹತ್ ಅಹಿಂದ (AHINDA) ಚಳವಳಿಯನ್ನು ರೂಪಿಸಿ ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯನ್ನಾಗಿ ಬೆಳೆಸುವಲ್ಲಿ ಸತೀಶ್ ಜಾರಕಿಹೊಳಿ ಮತ್ತು ಡಾ. ಎಚ್.ಸಿ. ಮಹದೇವಪ್ಪ ಪ್ರಮುಖ ಪಾತ್ರ ವಹಿಸಿದ್ದರು. ಹಳೆ ಮೈಸೂರು ಭಾಗದಲ್ಲಿ ಮಹದೇವಪ್ಪ ಹಾಗೂ ಮುಂಬೈ-ಕರ್ನಾಟಕ ಭಾಗದಲ್ಲಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರ ಬಲಗೈ ಬಂಟರಂತೆ ನಿಂತು ಚಳವಳಿಯನ್ನು ಮುನ್ನಡೆಸಿದ್ದರು. ಇದನ್ನೂ ಓದಿ: ಸರ್ಕಾರಿ ಬಂಗಲೆಗಾಗಿ ಹಾಲಿ, ಮಾಜಿ ಸಚಿವರ ಫೈಟ್ – ಮಹದೇವಪ್ಪ ವಾಸವಿರುವಾಗಲೇ ಜೆಸಿಬಿ ಘರ್ಜನೆ
ಬೆಂಗಳೂರಿನಲ್ಲಿ ನಡೆದಿರುವ ಅಹಿಂದ ರಜತ ಮಹೋತ್ಸವ ಸಮಾವೇಶಕ್ಕೆ ಚಳವಳಿಯ ಮೂಲ ರೂವಾರಿಗಳಿಗೇ ಆಹ್ವಾನ ನೀಡಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ “ನನಗೆ ಸಮಾವೇಶಕ್ಕೆ ಯಾವುದೇ ಆಹ್ವಾನ ಬಂದಿರಲಿಲ್ಲ. ಹೀಗಾಗಿ ನಾನು ಭಾಗವಹಿಸಿಲ್ಲ” ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಆಪ್ತರಾಗಿದ್ದ ಹೆಚ್.ಸಿ.ಮಹದೇವಪ್ಪ ಈಗ ಅಂತರಕಾಯ್ದುಕೊಂಡಿದ್ದಾರೆ. ಅಹಿಂದ ಸಮಾವೇಶಕ್ಕೆ ಮಾರ್ಮಿಕವಾಗಿ ಟಾಂಗ್ ಕೊಟ್ಟಿದ್ದಾರೆ. ಅಹಿಂದ ಒಬ್ಬರಿಂದಲೇ ಆಗಿಲ್ಲ. ಮೊದಲು ಹುಬ್ಬಳ್ಳಿಯಲ್ಲಿ ಅಹಿಂದ ಆಯ್ತು. ನಾನೊಬ್ಬನೇ ಕುಳಿತು ರೂಪಿಸಿದ್ದೆ. ಬರೀ ಭಾಷಣ ಮಾಡಿ ಹೋಗುವುದಲ್ಲ ಎಂದು ಠಕ್ಕರ್ ಕೊಟ್ಟಿದ್ದಾರೆ.
ಅಹಿಂದ ಒಬ್ಬರಿಂದಲೇ ಆಗಿಲ್ಲ. ಮೊದಲು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶವಾದಾಗ ನಾನೊಬ್ಬನೇ ಕುಳಿತು ಅದರ ರೂಪುರೇಷೆ ಸಿದ್ಧಪಡಿಸಿದ್ದೆ. ಕೇವಲ ಭಾಷಣ ಮಾಡಿ ಹೋಗುವುದರಿಂದ ಅಥವಾ ಸಭೆ ಸೇರಿ ನಿರ್ಣಯ ಮಾಡುವುದರಿಂದ ನಾಯಕತ್ವ ಬರಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಇದೆಲ್ಲ ನಡೆಯುವುದಿಲ್ಲ. ದೇಶವನ್ನು ಹೇಗೆ ಕಟ್ಟಬೇಕು ಎಂಬುದು ಮುಖ್ಯ. ಯಾರಿಗೆ ಬದ್ಧತೆ ಇದೆಯೋ ಅವರು ಚಳವಳಿಯನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಅಹಿಂದ ಚಳವಳಿ ಮೂಲಕವೇ ನಾವೆಲ್ಲ ಒಂದೇ ಎಂದು ಗಟ್ಟಿತನ ಗೆಳೆತನವಿದ್ದ ಟೀಂನಲ್ಲಿ ಬಿರುಕು ಸ್ಪಷ್ಟವಾಗ್ತಿದ್ದು, ಸಿದ್ದರಾಮಯ್ಯ ಆಪ್ತಕೂಟದ ಕೊಂಡಿಗಳ ಕಳಚುವಿಕೆ ಹೊಸ ರಾಜಕೀಯ ಮೇಲಾಟಕ್ಕೆ ಸಾಕ್ಷಿ ಆಗುತ್ತಾ ಕಾದುನೋಡಬೇಕಿದೆ.
