– 3 ಸಾವಿರ ಕಡಿಮೆ ಮಾಡುವಲ್ಲಿ ಮಾತ್ರ ನಾವು ಯಶಸ್ವಿಯಾಗಿದ್ದೇವೆ
ಬೆಂಗಳೂರು: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು CWRC (ಕಾವೇರಿ ನೀರು ನಿಯಂತ್ರಣ ಸಮಿತಿ) ಆದೇಶಿಸಿದೆ. ಇದು ನೋವಿನ ಸಂಗತಿಯಾಗಿದ್ದು, ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕ್ತೀವಿ ಅಂತ ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ (Chaluvaraya Swamy) ತಿಳಿಸಿದರು.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಬಹಳ ಕಠಿಣ ಪರಿಸ್ಥಿತಿ ಇದೆ, ವಸ್ತು ಸ್ಥಿತಿ ಕಷ್ಟ ಇದೆ. ಇದೊಂದು ನಮಗೆ ಬಹಳ ನೋವಿನ ಸಂಗತಿ. ತುಂಬಾ ಬೇಸರವೂ ಆಗುತ್ತದೆ. ಅಧಿಕಾರಿಗಳೆಲ್ಲ ಮಾಹಿತಿಯೊಂದಿಗೆ ಹೋಗಿ ವಾದ ಮಾಡಿದ್ದಾರೆ. ಇದಾದ ಬಳಿಕ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೆ. ಅದರಲ್ಲಿ ಬಹಳ ವ್ಯತ್ಯಾಸ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕೆಲವು ವಿರಳ ಪ್ರಕರಣಗಳಲ್ಲಿ ಕಡಿಮೆ ಆದೇಶ ಮಾಡಿದ ಉದಾಹರಣೆ ಇದೆ. ನಿರ್ವಹಣಾ ಸಮಿತಿಯ ಆದೇಶವನ್ನೂ ನೋಡಿದ ಬಳಿಕ ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು.

ಸುಪ್ರಿಂ ಕೋರ್ಟ್ ಗೆ (Supreme Court) ನಾವು ಅರ್ಜಿ ಹಾಕಬೇಕಾಗುತ್ತದೆ. ಅಡ್ವೋಕೇಟ್ ಜನರಲ್ ಜೊತೆಗೆ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಬೇಕು. ಎಲ್ಲ ತಜ್ಞರ ಜೊತೆ ಚರ್ಚೆ ಮಾಡಿ ನಾಳೆಯೇ ಮೇಲ್ಮನವಿ ಸಲ್ಲಿಸುವ ತೀರ್ಮಾನ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ವಸ್ತು ಸ್ಥಿತಿ ತುಂಬಾ ಕಷ್ಟ ಇದೆ. ಕಳೆದ ವಾರದಿಂದಲೇ ಒಳ ಹರಿವು ಕಡಿಮೆ ಆಗಿದೆ.6 ಸಾವಿರ ಕ್ಯುಸೆಕ್ ನೀರು ಬಿಡುವುದು ಕಷ್ಟ ಇದೆ. ಮುಂದಿನ ಹೆಜ್ಜೆ ಏನು ಇಡಬೇಕೆಂದು ನಾಳೆ ತೀರ್ಮಾನ ಮಾಡ್ತೇವೆ. ದೆಹಲಿಯಲ್ಲಿ ಕೂತು ಆಡಳಿತ ಮಾಡುವವರಿಗೆ ಸಮಸ್ಯೆ ಅರ್ಥ ಆಗಲ್ಲ. ಇದು ಒಪ್ಪುವಂತ ಆದೇಶ ಅಲ್ಲ. ನೀರು ಬಿಡಬಹುದು ಎಂಬ ಮ್ಯಾನೇಜಿಂಗ್ ಪರಿಸ್ಥಿತಿ ಕೂಡ ಇಲ್ಲ. ಕುಡಿಯುವ ನೀರಿಗೆ ಕೊರತೆ ಇರುವ ಪರಿಸ್ಥಿತಿ ಇದೆ. ಸಿಎಂ ಜೊತೆಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡ್ತೀವಿ ಅಂತ ವಿವರಿಸಿದ್ರು.
