ಲಂಡನ್: ಶುದ್ಧ ಸಾತ್ವಿಕ ಪ್ರೇಮವೇ ನಮ್ಮ ಸಂಸ್ಥೆಯ ಕಾರ್ಯದ ಅಡಿಪಾಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಸರಸಂಘಚಾಲಕ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.
ಲಂಡನ್ನಲ್ಲಿ(London) ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಪನಾಪನ್ (ಆತ್ಮೀಯತೆ ಮತ್ತು ಏಕತೆಯ ಭಾವನೆ) ಎಂಬುದು ಹಿಂದೂ ಚಿಂತನೆ ಹಾಗೂ ಆರೆಸ್ಸೆಸ್ನ ಕಾರ್ಯವಿಧಾನದ ಮುಖ್ಯ ತಿರುಳಾಗಿದೆ ಎಂದು ತಿಳಿಸಿದರು.
ಕೆಲವರು ನಮ್ಮ ಕಾರ್ಯಕ್ಕೆ ತೀವ್ರ ದ್ವೇಷವೇ ಆಧಾರ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ‘ಶುದ್ಧ ಸಾತ್ವಿಕ ಪ್ರೇಮ’ವೇ ನಮ್ಮ ಕಾರ್ಯಕ್ಕೆ ಮುಖ್ಯ ಆಧಾರ ಎಂದು ಭಾಗವತ್ ಹೇಳಿದರು.
ಆತ್ಮೀಯತೆಯ ಈ ಪರಿಕಲ್ಪನೆಯು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರದೆ ಕುಟುಂಬ, ಸಮುದಾಯ, ಸಮಾಜ ಮತ್ತು ಇಡೀ ಮಾನವಕುಲಕ್ಕೆ ವಿಸ್ತರಿಸುತ್ತದೆ. ಪ್ರಕೃತಿಯೊಂದಿಗೆ ಹಿಂದೂ ನಾಗರಿಕತೆ ಹೊಂದಿರುವ ನಿಕಟ ಸಂಬಂಧವನ್ನು ಒತ್ತಿ ಹೇಳಿದರು. ಹಿಂದೂ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಆತ ಕುಟುಂಬ, ಸಮುದಾಯ, ಸಮಾಜ ಹಾಗೂ ಇಡೀ ಮಾನವಕುಲದ ಭಾಗ. ಹಿಂದೂಗಳು ಪ್ರಕೃತಿಯನ್ನು ಪೂಜಿಸುವುದು ಮಾತ್ರವಲ್ಲ, ಪ್ರೀತಿಸುತ್ತಾರೆ ಎಂದರು.
ಈ ಭಾವನೆಯೇ ಏಕತೆ ಮತ್ತು ಚಾರಿತ್ರ್ಯ ನಿರ್ಮಾಣಕ್ಕೆ ಆಧಾರವಾಗಿದ್ದು, 100 ವರ್ಷಗಳ ನಂತರವೂ ಸಂಘದಲ್ಲಿ ಇದು ಅಚಲವಾಗಿ ಉಳಿದಿದೆ ಎಂದು ವಿವರಿಸಿದ ಅವರು, ಸಂಘದಲ್ಲಿ ನಾವು ‘ಶುದ್ಧ ಸಾತ್ವಿಕ ಪ್ರೇಮ ಅಪನೇ ಕಾರ್ಯ ಕಾ ಆಧಾರ ಹೈ’ ಎಂಬ ಗೀತೆಯನ್ನು ಹಾಡುತ್ತೇವೆ. 100 ವರ್ಷ ಕಳೆದರೂ ಈ ಭಾವನೆ ಮಾಸಿಲ್ಲ. ಸ್ವಯಂಸೇವಕರ ನಡವಳಿಕೆಯಲ್ಲಿ ಮತ್ತು ಸಂಘದ ವಾತಾವರಣದಲ್ಲಿ ಇದೇ ಸಾತ್ವಿಕ ಪ್ರೇಮವನ್ನು ನೀವು ಕಾಣಬಹುದು ಎಂದು ಹೇಳಿದರು. ಇದನ್ನೂ ಓದಿ: ದುಸ್ಸಾಹಸಕ್ಕೆ ಕೈಹಾಕಿದ್ರೆ ಪಾಕಿಸ್ತಾನಕ್ಕೆ ನುಗ್ಗಿ ನಮ್ಮ ಸೇನೆ ಬೇಟೆಯಾಡುತ್ತೆ: ಮೋದಿ
ಮಾನವನ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಸಮತೋಲನದಲ್ಲಿ ಕೊಂಡೊಯ್ಯುವ ಅಗತ್ಯವನ್ನು ಪ್ರತಿಪಾದಿಸಿದ ಭಾಗವತ್, “ನಾವು ಪ್ರಕೃತಿಯ ಒಂದು ಭಾಗವಾಗಿರುವಾಗ, ನಮ್ಮ ಪ್ರಗತಿಯು ಪ್ರಕೃತಿಯ ಬೆಳವಣಿಗೆಗೆ ಪೂರಕವಾಗಿರಬೇಕು. ಅಭಿವೃದ್ಧಿ ಮತ್ತು ಪ್ರಕೃತಿ ಪರಸ್ಪರ ಮುಖಾಮುಖಿಯಾಗಬಾರದು, ಬದಲಿಗೆ ಪೂರಕವಾಗಿರಬೇಕು. ಬದುಕು ಮತ್ತು ಬದುಕಲು ಬಿಡು ಅಷ್ಟೇ ಅಲ್ಲದೆ ಬದುಕು, ಬದುಕಲು ಬಿಡು ಮತ್ತು ಇತರರನ್ನೂ ಬದುಕಿಸು ಎಂಬುದು ನಮ್ಮ ಚಿಂತನೆ. ಹಿಂದೂಗಳು ಇಂತಹ ಸಮತೋಲನವನ್ನು ಜಗತ್ತಿಗೆ ನೀಡಬೇಕಿದೆ ಎಂದು ತಿಳಿಸಿದರು.
ವೈಯಕ್ತಿಕ ಹಕ್ಕುಗಳು ಮತ್ತು ಸಾಮಾಜಿಕ ಹೊಣೆಗಾರಿಕೆ, ಹಾಗೆಯೇ ಮಾನವ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಒಟ್ಟಿಗೆ ಸಾಗಲು ಹಿಂದೂ ನಾಗರಿಕತೆಯ ಚೌಕಟ್ಟು ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಆರೆಸ್ಸೆಸ್ ಶತಮಾನೋತ್ಸವ ಆಚರಣೆ ಹಾಗೂ ವಿದೇಶಿ ಸಂಪರ್ಕ ಅಭಿಯಾನದ ಭಾಗವಾಗಿ ಲಂಡನ್ನಲ್ಲಿ ಸೆಪ್ಟೆಂಬರ್ 6 ರಂದು “ಏಕತೆಯ ಆಚರಣೆ” (Celebration of Oneness) ಎಂಬ ಧ್ಯೇಯವಾಕ್ಯದೊಂದಿಗೆ ನಾಗರಿಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 1966 ರಲ್ಲಿ ಬ್ರಿಟನ್ನಲ್ಲಿ ಸ್ಥಾಪನೆಯಾದ ಹಿಂದೂ ಸ್ವಯಂಸೇವಕ ಸಂಘ ಯುಕೆ (HSS UK) ಮತ್ತು ಇಂಟೆಗ್ರಲ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಯುನೈಟೆಡ್ ಕಿಂಗ್ಡಮ್ನಾದ್ಯಂತ 310 ಕ್ಕೂ ಹೆಚ್ಚು ಸಮುದಾಯ ಸಂಘಟನೆಗಳು ಪಾಲ್ಗೊಂಡಿದ್ದವು.
ಮೋಹನ್ ಭಾಗವತ್ ಅವರ ಮೂರು ನಗರಗಳ ಶತಮಾನೋತ್ಸವ ಪ್ರವಾಸದ ಭಾಗವಾಗಿ ನ್ಯೂಯಾರ್ಕ್ ಮತ್ತು ಟೊರೊಂಟೊ ಭೇಟಿಯ ನಂತರ ಅಂತಿಮ ಹಂತದ ಪ್ರವಾಸಕ್ಕಾಗಿ ಅವರು ಸೆಪ್ಟೆಂಬರ್ 2 ರಂದು ಲಂಡನ್ಗೆ ಆಗಮಿಸಿದ್ದರು.
