ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರೈನಾ (Suresh Raina), ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತವೆ. ಆದ್ರೆ ಬೌಲರ್‌ಗಳ ವೃತ್ತಿಜೀವನವನ್ನ ಹೆಚ್ಚು ಕಷ್ಟಕರವಾಗಿಸಿದೆ ಎಂದು ಹೇಳಿದ್ದಾರೆ.

228 ಐಪಿಎಲ್ ಪಂದ್ಯಗಳನ್ನಾಡಿರುವ ರೈನಾ, ಈ ನಿಯಮವು ಪಂದ್ಯದ ಸ್ಕೋರ್ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ 200 ಕ್ಕೂ ಹೆಚ್ಚು ಮೊತ್ತ ದಾಖಲಿಸುವುದು ಸುಲಭವಾಗಿದೆ. ಅಲ್ಲದೇ ಕೆಲ ತಂಡಗಳು 300 ರನ್ ತಲುಪುವ ಬೆದರಿಕೆಯನ್ನೂ ಒಡ್ಡುತ್ತಿವೆ. ಆದ್ರೆ ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ವಿರೋಧಿಸುತ್ತೇನೆ ಎಂದಿದ್ದಾರೆ.
ಬಹಳಷ್ಟು ಫಿಟ್ ಆಟಗಾರರು ಬ್ಯಾಟಿಂಗ್ ಮಾಡುತ್ತಾರೆ, ಇನ್ನೂ ಕೆಲವರು ಬೆಂಚ್‌ನಲ್ಲಿ ಕಾಯುತ್ತಾರೆ. ಆದ್ರೆ ಬೌಲರ್‌ಗಳಿಗೆ ಏನೂ ಉಳಿದಿಲ್ಲ. ಬೌಲರ್‌ಗಳ ವೃತ್ತಿಜೀವನವನ್ನ ಇದು ಕಠಿಣವಾಗಿಸಿದೆ. 300 ರನ್‌ಗಳ ಗಡಿಯನ್ನೂ ಸಮೀಪಿಸುತ್ತಿರುವುದರಿಂದ ಹೆಚ್ಚುವರಿ ಬ್ಯಾಟ್ಸ್‌ಮನ್‌ಗಳಿದ್ದರೆ, ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ ಎನ್ನುತ್ತಾರೆ ರೈನಾ.
ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕ ಆಟಗಾರರು ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನ ವಿರೋಧಿಸಿದ್ದರು.

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?
ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದಾಗಿದೆ. ನಿಯಮದ ಪ್ರಕಾರ ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಒಬ್ಬ ಬ್ಯಾಟ್ಸ್‌ಮನ್ ಬದಲಿಗೆ ಬೌಲರ್‌ಅನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಇದರಿಂದ ಉಭಯ ತಂಡಗಳಿಗೆ ಒಬ್ಬ ಬ್ಯಾಟ್ಸ್‌ಮನ್ ಮತ್ತು ಬೌಲರ್ ಹೆಚ್ಚುವರಿ ಸಿಕ್ಕಂತೆ ಆಗುತ್ತದೆ. ಅಲ್ಲದೇ ಒಟ್ಟು 4 ಜನ ಮೀಸಲು ಆಟಗಾರರು ಇರುವುದರಿಂದ ಪ್ಲೇಯಿಂಗ್-11 ನಲ್ಲಿರುವ ಆಟಗಾರರು ಗಾಯಕ್ಕೆ ತುತ್ತಾದಲ್ಲಿ ಮತ್ತೊಬ್ಬರನ್ನ ಫೀಲ್ಡಿಂಗ್‌ಗೆ ಬಳಸಿಕೊಳ್ಳುವ ಅವಕಾಶವೂ ಇದೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬಂದಿದ್ದು ಯಾವಾಗ?
ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಮೊದಲು ಇಂಪ್ಯಾಕ್ಟ್ ಪ್ಲೇಯರ್ ನಿಯಮ ಪರಿಚಯಿಸಲಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಬಿಸಿಸಿಐ ಐಪಿಎಲ್ ಟೂರ್ನಿಯಲ್ಲಿ ಅಳವಡಿಸಲು ನಿರ್ಧರಿಸಿತು. ಆದ್ರೆ ಐಪಿಎಲ್‌ಗೂ ಮುನ್ನ 2022-23ರ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿ ಈ ನಿಯಮವನ್ನು ಅಳವಡಿಸಿಕೊಂಡು ಪ್ರಯೋಗ ನಡೆಸಿತ್ತು. ಅದು ಸಕ್ಸಸ್ ಆದ ನಂತರ ಕಳೆದ ಎರಡು ಆವೃತ್ತಿಗಳಿಂದ ಐಪಿಎಲ್‌ನಲ್ಲಿ ಅನುಷ್ಠಾನಕ್ಕೆ ತರಲಾಯಿತು.
