– ನಾಡಿನ ದೊರೆಯಲ್ಲ, ನಾನು ಪ್ರಜಾಸೇವಕ
– ಶೀಘ್ರವೇ ಬರ ಪಟ್ಟಿಗೆ 50 ತಾಲೂಕುಗಳು
ಬಳ್ಳಾರಿ: ಜನರ ಸೇವೆಯೇ ಜನಾರ್ದನ ಸೇವೆ. ಪ್ರಜಾಪ್ರಭುತ್ವದಲ್ಲಿ ನೀವು ನಮ್ಮನ್ನು 136 ಸ್ಥಾನಗಳಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದೀರಿ. ದೊರೆಗಳ ಆಡಳಿತ ಮುಗಿದಿದ್ದು, ಈಗ ಪ್ರಜೆಗಳ ಆಡಳಿತ ಬಂದಿದೆ. ಹೀಗಾಗಿ ನನ್ನನ್ನು ‘ನಾಡಿನ ದೊರೆ’ ಎಂದು ಕರೆಯುವ ಬದಲು ‘ಪ್ರಜಾಸೇವಕ’ ಎಂದು ಕರೆಯಿರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ವಿಜಯನಗರ(Vijanagara) ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹತ್ವಾಕಾಂಕ್ಷೆಯ ನೂತನ ಪ್ರಜಾಸೇವಾ ಇಲಾಖೆ ಹಾಗೂ ಆಡಳಿತ ವಿಕೇಂದ್ರೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರಗೊಂಡಿತು.
ಅಧಿಕಾರಿಗಳು ಕೇವಲ ಕಚೇರಿಗಳಲ್ಲಿ ಕುಳಿತು ಆಡಳಿತ ನಡೆಸಬಾರದು. ಸಾಮಾನ್ಯ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವಿಧಾನಸೌಧ, ಡಿಸಿ ಕಚೇರಿ ಅಥವಾ ಜನಪ್ರತಿನಿಧಿಗಳ ಬಳಿ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ಜನರ ಮನೆಬಾಗಿಲಿಗೆ ಬರುವ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿದಾಗ ಪ್ರಧಾನಿಯಿಂದ ಹಿಡಿದು ವಿಪಕ್ಷಗಳವರೆಗೆ ಎಲ್ಲರೂ ಟೀಕೆ ಮಾಡಿದ್ದರು. ಆದರೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವು ಅದನ್ನು ಯಶಸ್ವಿಯಾಗಿ ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಅದೇ ರೀತಿ ಈ ನೂತನ ‘ಪ್ರಜಾಸೇವಾ ಯೋಜನೆ’ಯೂ ದೇಶಕ್ಕೆ ಮಾದರಿಯಾಗಲಿದೆ. ‘ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರʼ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಿಗಳು ಜನರ ಬಳಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಅರ್ಜಿಗಳನ್ನು ಸ್ವೀಕರಿಸುವುದು ಮಾತ್ರವಲ್ಲದೆ ಅವುಗಳಿಗೆ ಪರಿಹಾರ ದೊರಕುವವರೆಗೂ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ಬಡವರ ಕಾನೂನು ಹೋರಾಟಕ್ಕೆ ಅಗತ್ಯವಿದ್ದರೆ ಸರ್ಕಾರವೇ ವಕೀಲರನ್ನು ಒದಗಿಸಿ ನ್ಯಾಯ ಕೊಡಿಸಲಿದೆ ಎಂದು ಭರವಸೆ ನೀಡಿದರು. ಇದೇ ವೇಳೆ ಕಂದಾಯ ಇಲಾಖೆಯಡಿ ಹಕ್ಕುಪತ್ರ ಹಾಗೂ ‘ಭೂಮಿ ಗ್ಯಾರಂಟಿ’ ಒದಗಿಸುವ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರಿಗೆ ಶುಭ ಕೋರಿದ ಅವರು, ಅಕ್ಷರ ಸೇವೆ ಪರಮಾತ್ಮನ ಸೇವೆಗೆ ಸಮಾನ. ಸಮಾಜವನ್ನು ತಿದ್ದಿ ತೀಡುವ ಶಿಕ್ಷಕರಿಗೆ ಗೌರವ ಸಲ್ಲಿಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ರಾಜ್ಯದ 4 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ವಿಶೇಷ ಬಿರುದು ಮತ್ತು ಗೌರವ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಆಂತರಿಕವಾಗಿ ಶೇ. 7 ರಷ್ಟು ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಇದರ ಜಾರಿಯ ರೂಪುರೇಷೆ ಪ್ರಕಟಿಸಲಾಗುವುದು ಎಂದರು.
ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಈಗಾಗಲೇ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಶೀಘ್ರದಲ್ಲೇ ಮತ್ತೊಂದು ಸುತ್ತಿನಲ್ಲಿ 50 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಜನರಿಗೆ ಶಕ್ತಿ ತುಂಬಲಿದ್ದೇವೆ. ಬರಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್ ಬಳಕೆ ಕುರಿತು ಟೀಕಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಅವರು, ನಾವೇನು ಕಣ್ಣುಮುಚ್ಚಿ ಕುಳಿತಿಲ್ಲ, ಜನರ ಕಷ್ಟಕ್ಕೆ ಸ್ಪಂದಿಸಲು ಕೆಲಸ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳು ಪ್ರತಿ ಶನಿವಾರ ಹಳ್ಳಿ, ಪಂಚಾಯಿತಿ ಮಟ್ಟಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರಲ್ಲದೆ, ಹೊಸ ನಾಯಕತ್ವ ಬೆಳೆಸಲು ಪಂಚಾಯಿತಿ ಮಟ್ಟದಲ್ಲಿ ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
