ಬಳ್ಳಾರಿ: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕನಸಿನ ‘ಪ್ರಜಾಸೇವಾ ಇಲಾಖೆ’ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಇಂದು ಚಾಲನೆ ನೀಡಲಾಯಿತು.
ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಶಾಸಕಿ ಲತಾ ಮಲ್ಲಿಕಾರ್ಜುನ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಜ್ಯೋತಿ ಬೆಳಗಿಸಿದರು. ಬಳಿಕ ಶಾಸಕರಿಂದಲೂ ಜ್ಯೋತಿ ಬೆಳಗಿಸಲಾಯಿತು. ಕೊನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ನಮನ
ಜ್ಯೋತಿ ಬೆಳಗಿಸಿದ ಬಳಿಕ ಸಿಎಂ ಡಿಕೆ ಶಿವಕುಮಾರ್ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಸಚಿವರು, ಸಂಸದರು ಹಾಗೂ ಶಾಸಕರು ಸಿಎಂ ಡಿಕೆಶಿಗೆ ಸಾಥ್ ನೀಡಿದರು.
ಜನರತ್ತ ಕೈ ಬೀಸುತ್ತಾ ವೇದಿಕೆಗೆ ಆಗಮಿಸಿದ ಡಿಕೆಶಿ
ಕಾರ್ಯಕ್ರಮದ ವೇದಿಕೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಸ್ವಾಗತಿಸಿದರು. ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಜನರತ್ತ ಕೈ ಬೀಸುತ್ತಾ ಡಿಕೆಶಿ ವೇದಿಕೆಗೆ ಆಗಮಿಸಿದರು. ಈ ವೇಳೆ ಅಭಿಮಾನಿಗಳು ಸಿಎಂ ಡಿ.ಕೆ. ಶಿವಕುಮಾರ್ ಅವರ ಮೇಲೆ ಹೂಮಳೆ ಸುರಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಹುಣಸೆ ಬೀಜದ ಹಾರ, ಒನಕೆ ಓಬವ್ವನ ಮೂರ್ತಿ ನೀಡಿ ಸನ್ಮಾನ
ಕೂಡ್ಲಿಗಿ ‘ಹುಣಸೆ ನಾಡು’ ಎಂಬ ಖ್ಯಾತಿ ಹೊಂದಿರುವ ಹಿನ್ನೆಲೆಯಲ್ಲಿ ಶಾಸಕ ಎನ್.ಟಿ. ಶ್ರೀನಿವಾಸ್ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹುಣಸೆ ಬೀಜದಿಂದ ತಯಾರಿಸಿದ ವಿಶೇಷ ಹಾರವನ್ನು ನೀಡಿ ಸನ್ಮಾನಿಸಿದರು. ಇದೇ ವೇಳೆ ಒನಕೆ ಓಬವ್ವನ ಮೂರ್ತಿಯನ್ನೂ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವಂತಪ್ಪ, ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಹಾಗೂ ಕೂಡ್ಲಿಗಿ ಶಾಸಕ ಎನ್.ಟಿ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹರ್ಷಗುಪ್ತ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
