– ಪ್ರಧಾನಿ ಮೋದಿ – ಇರಾನ್ ಅಧ್ಯಕ್ಷ ಮಸೂದ್ ಭೇಟಿ ಬೆನ್ನಲ್ಲೇ ರುಬಿಯೋ ವಾರ್ನಿಂಗ್
ನವದೆಹಲಿ: ಇರಾನ್ ದೇಶವು ಅಮೆರಿಕ (America) ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಹಾಗೂ ಆದಾಯ ಗಳಿಸಲು ಯಾವುದೇ ದೇಶ ಸಹಾಯ ಮಾಡಬಾರದು ಎಂದು ಭಾರತ ಸೇರಿದಂತೆ ಇತರ ದೇಶಗಳಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ (Marco Rubio) ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ (Masoud Pezeshkian) ಅವರನ್ನ ಭೇಟಿಯಾದ ಕೆಲವೇ ದಿನಗಳ ಬಳಿಕ, ರುಬಿಯೋ ಅವರ ಹೇಳಿಕೆ ಹೊರಬಂದಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ರುಬಿಯೋ, ಪ್ರಧಾನಿ ಮೋದಿ ಮತ್ತು ಇರಾನ್ ಅಧ್ಯಕ್ಷರ ಭೇಟಿಯ ಕುರಿತು ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ, ಭಾರತವು ಇರಾನ್ನೊಂದಿಗೆ ಹೊಸ ವ್ಯಾಪಾರ ಒಪ್ಪಂದ (Tread Deal) ಸ್ಥಾಪಿಸಲು ಮುಂದಾಗಿದೆಯೇ ಎಂಬ ಪ್ರಶ್ನೆಗೂ ಅವರು ಉತ್ತರಿಸಿ, ಭಾರತ ಮತ್ತು ಇರಾನ್ ನಡುವೆ ಯಾವುದೇ ವ್ಯಾಪಾರ ಒಪ್ಪಂದವಿದೆ ಎಂದು ನಾನು ಭಾವಿಸಲ್ಲ ಎಂದಿದ್ದಾರೆ.
ಮುಂದುವರಿದು… ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿದೇಶಾಂಗ ನೀತಿ ರೂಪಿಸಿಕೊಳ್ಳುವ ಮತ್ತು ಇರಾನ್ನೊಂದಿಗೆ ಸಂಬಂಧ ಹೊಂದುವ ಹಕ್ಕಿದೆ. ಆದ್ರೆ ಇರಾನ್ ಅಮೆರಿಕದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಆರ್ಥಿಕ ಚಟುವಟಿಕೆಗಳಿಗೆ ಯಾವುದೇ ದೇಶ ಬೆಂಬಲ ನೀಡಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಆಡಳಿತವು ಇರಾನ್ ವಿರುದ್ಧದ ಆರ್ಥಿಕ ನಿರ್ಬಂಧವನ್ನು ಈಗ ಮತ್ತಷ್ಟು ತೀವ್ರಗೊಳಿಸಿದೆ. ಇರಾನ್ನೊಂದಿಗೆ ವ್ಯಾಪಾರ ನಡೆಸುವುದನ್ನ ಮುಂದುವರಿಸುವ ದೇಶಗಳು ಮತ್ತು ಕಂಪನಿಗಳ ವಿರುದ್ಧವೂ ದ್ವಿತೀಯ ಹಂತದ ನಿರ್ಬಂಧಗಳು (Secondary Sanctions) ಜಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಆಗಸ್ಟ್ 24ರಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಇರಾನ್ಗೆ ಉಳಿದ ಆರ್ಥಿಕ ಸಂಪರ್ಕಗಳನ್ನು ಕಡಿತಗೊಳಿಸುವ ಉದ್ದೇಶದ ಕಾರ್ಯಾಚರಣೆ ʻಆಪರೇಷನ್ ಎಕನಾಮಿಕ್ ಔಟ್ಕಾಸ್ಟ್ʼ ಎಂದು ಘೋಷಿಸಿದ್ದರು. ಇದನ್ನು ಅವರು ʻಆರ್ಥಿಕ ಡಿ-ಡೇʼ ಎಂದು ಬಣ್ಣಿಸಿದ್ದರು.
ಭಾರತ ಸೇರಿದಂತೆ ಇತರೆ ದೇಶಗಳಿಗೆ ರುಬಿಯೋ ಸಂದೇಶ
ವಿಶ್ವದ ಹಲವು ದೇಶಗಳು ಇರಾನ್ನೊಂದಿಗೆ ಸಂಪರ್ಕ ಹೊಂದಿರುವುದು ಅಮೆರಿಕಕ್ಕೆ ತಿಳಿದಿದೆ. ಈ ಹಿಂದೆ ಅಮೆರಿಕವೂ ಇರಾನ್ ಆಡಳಿತದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ. ಇಂತಹ ಕೆಲವು ಚರ್ಚೆಗಳ ಸಂದರ್ಭದಲ್ಲಿ ನಾವು ಕೂಡ ಇರಾನ್ ಆಡಳಿತದ ಪ್ರತಿನಿಧಿಗಳೊಂದಿಗೆ ಭೇಟಿಯಾಗಿದ್ದೇವೆ ಮತ್ತು ಸಂಪರ್ಕದಲ್ಲಿದ್ದೇವೆ. ಆದರೆ, ಇರಾನ್ ಅಮೆರಿಕದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಅಥವಾ ಆದಾಯ ಗಳಿಸಲು ಸಹಾಯ ಮಾಡುವ ಆರ್ಥಿಕ ವ್ಯವಸ್ಥೆಗಳನ್ನು ನಿರ್ಮಿಸುವ ವಿಷಯದಲ್ಲಿ ಅಮೆರಿಕ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಅಂತಿಮವಾಗಿ ಏನಾಗುತ್ತದೆ ಎಂಬುದರಲ್ಲಿ ಟ್ರಂಪ್ ಬಹಳ ಸ್ಪಷ್ಟವಾಗಿದ್ದಾರೆ. ಯಾವುದೇ ದೇಶವೂ ಇರಾನ್ಗೆ ಸಹಾಯ ಮಾಡಬಾರದು. ಇರಾನ್ ಆದಾಯ ಗಳಿಸಲು ಮಾರ್ಗಗಳನ್ನ ಸೃಷ್ಟಿಸುವ ಮೂಲಕ ಯಾವುದೇ ದೇಶವೂ ಅವರಿಗೆ ನೆರವಾಗಬಾರದು. ಆ ಆದಾಯವನ್ನು ಅವರು ಭಯೋತ್ಪಾದನೆಗೆ ಬೆಂಬಲ ನೀಡಲು ಮತ್ತು ಪರಮಾಣು ಶಸ್ತ್ರಾಸ್ತ್ರ ನಿರ್ಮಿಸಲು ಬಳಸಬಹುದು. ದೇಶಗಳು ಹಾಗೆ ಮಾಡಲು ನಿರ್ಧರಿಸಿದರೆ, ನಾವು ಅವರ ಮೇಲೂ ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ.

ಬಿಷ್ಕೆಕ್ನಲ್ಲಿ ಮೋದಿ–ಪೆಜೆಶ್ಕಿಯನ್ ಭೇಟಿ
ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಗೆ ಇತ್ತೀಚೆಗೆ ವಿದೇಶ ಪ್ರವಾಸ ಹೊರಟಿದ್ದ ಪ್ರಧಾನಿ ಮೋದಿ ಬಿಷ್ಕೆಕ್ನಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರನ್ನ ಭೇಟಿಯಾಗಿದ್ದರು.
ಭಾರತದ ನಿಲುವು ಏನು?
ಒಂದೆಡೆ ಭಾರತವು ಇರಾನ್ನೊಂದಿಗೆ ತನ್ನ ದೀರ್ಘಕಾಲದ ದ್ವಿಪಕ್ಷೀಯ ಸಂಬಂಧ ಮುಂದುವರಿಸುವುದರ ಜೊತೆಗೆ ವ್ಯಾಪಾರ ವಿಸ್ತರಿಸುವ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ, ಮತ್ತೊಂದೆಡೆ ಅಮೆರಿಕವು ಇರಾನ್ ವಿರುದ್ಧದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಎಚ್ಚರಿಕೆ ನೀಡಿದೆ.
ಹೀಗಾಗಿ ಭಾರತ–ಇರಾನ್ ಸಂಬಂಧಗಳು, ಪ್ರಾದೇಶಿಕ ಭದ್ರತೆ ಮತ್ತು ಅಮೆರಿಕದ ನಿರ್ಬಂಧ ನೀತಿಯ ನಡುವೆ ಮುಂದಿನ ದಿನಗಳಲ್ಲಿ ಬೆಳೆಯುವ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಸಾಧ್ಯತೆ ಇದೆ.
