ಬೆಂಗಳೂರು/ಬೀದರ್: ಕೆಪಿಎಸ್‌ಸಿ (KPSC) ಪಶುವೈದ್ಯರ ನೇಮಕಾತಿ ಹಗರಣ ಪ್ರಕರಣದಲ್ಲಿ ಸಿಐಡಿಯಿಂದ ಅರೆಸ್ಟ್ ಆಗಿದ್ದ ಬಸವರಾಜ್ ಕನ್ನಾಳೆ ದುಡ್ಡಿನ ದುನಿಯಾ ಕಟ್ಟಿದ್ದು ಹೇಗೆ ಎನ್ನೋದು ಇದೀಗ ಒಂದೊಂದಾಗಿ ಹೊರಬೀಳುತ್ತಿದೆ.
12 ಸಾವಿರ ರೂ. ಸಂಬಳ ಪಡೆಯುತ್ತಿದ್ದ ಬಸವರಾಜ್ ಕನ್ನಾಳೆ ಕೋಟಿ ಕೋಟಿ ಆಸ್ತಿ ಸಾಮ್ರಾಜ್ಯ ಕಟ್ಟಿದ ಕಥೆಯೇ ರೋಚಕ. ಕೆಪಿಎಸ್‌ಸಿ ಪರೀಕ್ಷಾರ್ಥಗಳಿಂದ ಬಂದ ಕೋಟ್ಯಂತರ ರೂ. ಹಣದಿಂದ ಬಸವರಾಜ್ ಕನ್ನಾಳೆ 6 ತಿಂಗಳ ಹಿಂದಷ್ಟೇ ಬೀದರ್‌ನಿಂದ ಕನ್ನಾಳೆ ಟ್ರಾವೆಲ್ಸ್ ಶುರು ಮಾಡಿದ್ದ. ನಾಲ್ಕಕ್ಕೂ ಅಧಿಕ ಟ್ರಾವೆಲ್ ಬಸ್ ಸೇವೆಗಳು ಪ್ರಾರಂಭವಾಗಿದ್ದು, ಬೀದರ್ ಟು ಬೆಂಗಳೂರು, ಬೀದರ್ ಟು ಮುಂಬೈ, ಪುಣಿಗೆ ಸಂಚಾರ ಮಾಡುತ್ತಿವೆ. ಇದನ್ನೂ ಓದಿ: KPSC Scam| ಬಸವರಾಜ್ ಹೇಳಿದಂತೆ ಕೆಲಸ ಮಾಡಿದ್ದೇನೆ – ಸಿಐಡಿ ಮುಂದೆ ಗ್ಯಾನೇಂದ್ರ ತಪ್ಪೊಪ್ಪಿಗೆ
ಬಸವರಾಜ್ ಬಳಿ ಕನ್ನಾಳೆ ಟ್ರಾವೆಲ್ಸ್, ಭಾಗ್ಯವಂತಿ ಡೈರಿ ಫಾರ್ಮಹೌಸ್, ಬೆಂಗಳೂರಿನಲ್ಲಿ ಐಶಾರಾಮಿ ಮನೆ, ಭಾಲ್ಕಿಯಲ್ಲಿ ಬೃಹತ್ ನಿವಾಸ, ಸ್ವಗ್ರಾಮದಲ್ಲಿ 15 ಎಕರೆ ಜಮೀನು, 3 ವಾಣಿಜ್ಯ ಶಾಪ್‌ಗಳು, ಫಾರಿನ್ ಪ್ರವಾಸ, ತಂದೆ ಹುಟ್ಟುಹಬ್ಬಕ್ಕೆ ಇನೋವಾ ಕಾರು ಗಿಫ್ಟ್ ನೀಡಿದ್ದ. ತುಮಕೂರು ಸಿಂಡಿಕೇಟ್ ಸದಸ್ಯ ಆಗಿರುವ ಆರೋಪಿ ಬಸವರಾಜ್ ಕನ್ನಾಳೆ ಈ ಹಿಂದೆ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಬಳಿ 12 ಸಾವಿರ ರೂ.ಗೆ ಆಪ್ತ ಸಹಾಯಕ ಕೆಲಸ ಮಾಡಿದ್ದ. ಅಲ್ಲದೇ ಮುಂದೆ ಭಾಲ್ಕಿಯ ಎಂಎಲ್‌ಎ ಆಗುವ ತಯಾರಿ ನಡೆಸಿದ್ದ ಎನ್ನುವ ಅಂಶಗಳು ಹೊರಬಿದ್ದಿವೆ.
