ಬಳ್ಳಾರಿ: ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ರಾಜೀನಾಮೆ ಬಳಿಕ, ಕೆಪಿಎಸ್ಸಿ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ರಾಜೀನಾಮೆ ಆಗುತ್ತೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಹೊಸ ಬಾಂಬ್ ಸಿಡಿಸಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಬರ, KPSC ಹಗರಣ ಸೇರಿದಂತೆ ನಾನಾ ವಿಚಾರಗಳನ್ನಿಟ್ಟು ಕೊಂಡು ಪಾದಯಾತ್ರೆ ಮಾಡ್ತಿದ್ದೇವೆ. ವಾಲ್ಮೀಕಿ ಹಗರಣದಲ್ಲಿ ಈಗಾಗಲೇ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ನಾಗೇಂದ್ರ (B Nagendra) ರಾಜೀನಾಮೆ ವಿಚಾರದಲ್ಲಿ ಸದನದಲ್ಲಿ ಹೋರಾಟ ಮಾಡಿದ್ದೇವೆ. ಈ ಕಾರಣಕ್ಕೆ ಇವತ್ತು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಹಣ ಬಡವರಿಗೆ ಸೇರಬೇಕು. ಅಲ್ಲಿವರೆಗೂ ನಾವು ಹೋರಾಟ ಮಾಡ್ತೆವೆ ಎಂದರು.

ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗದೇ ಇರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ನಾನು ಹೆಚ್ಡಿಕೆ ಅವರ ಬಳಿ ಮಾತನಾಡುವೆ. ನಮ್ಮ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು NDA ಮೈತ್ರಿಕೂಟವಾಗಿಯೇ ಕೆಲಸ ಮಾಡುತ್ತಿದ್ದೇವೆ. ಯಾವುದೇ ಗೊಂದಲವಿಲ್ಲ. ಪಾದಯಾತ್ರೆಗೆ ಟಕ್ಕರ್ ಕೊಡಲು ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರು, ಸಂಸದರು ಸುದ್ದಿಗೋಷ್ಠಿ ಮಾಡಲಿ, ಯಾರೂ ಬೇಡ ಅಂದರು. ದಲಿತರ ದುಡ್ಡು ತಿಂದಿಲ್ವಾ? ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲಿ ಎಂದು ಕುಟುಕಿದರು.

KPSC ಹಗರಣ ಹೊರ ತೆಗೆದಿದ್ದು ನಾನು. ಹಲವು ಬಾರಿ ಸುದ್ದಿಗೋಷ್ಠಿ ಮಾಡಿದ್ದೇನೆ. KPSC ಹಗರಣದಲ್ಲಿ IAS ಅಧಿಕಾರಿಯನ್ನ ಬಂಧಿಸಿದ್ದಾರೆ. ಕೇವಲ IAS ಅಧಿಕಾರಿಯನ್ನು ಬಂಧಿಸಿದ್ರೆ ಆಗೋಲ್ಲ. KPSC ಅಧ್ಯಕ್ಷರ ಪ್ರಭಾವ ಬಳಸಿ, ಅವರು ನೇಮಕಾತಿ ಮಾಡಿಕೊಂಡಿದ್ದಾರೆ. ಯಾರು ಭಾಗಿಯಾಗಿದ್ದಾರೋ ಅವರನ್ನು ಬಂಧಿಸಿ. KPSC ಹಗರಣದಲ್ಲಿ ಬಂಧನವಾಗಿರುವ ವ್ಯಕ್ತಿ ಬಿಜೆಪಿಯ ಅಧ್ಯಕ್ಷನೂ, ಪದಾಧಿಕಾರಿಯೋ, ಉನ್ನತ ಹುದ್ದೆಯಲ್ಲಿರೋರಲ್ಲ. ಯಾರೇ ಆಗಲಿ ಮೊದಲು ಬಂಧಿಸಿ ತನಿಖೆಗೆ ಒಳಪಡಿಸಿ. ಈಗಾಗಲೇ ವಾಲ್ಮೀಕಿ ಹಗರಣದಲ್ಲಿ ಒಂದು ವಿಕೆಟ್ ಬಿದ್ದಿದೆ. KPSC ಹಗರಣದಲ್ಲಿ ಪ್ರಿಯಾಂಕ ಖರ್ಗೆ ವಿಕೇಟ್ ಪತನವಾಗುತ್ತದೆ ಎಂದು ಬಾಂಬ್ ಸಿಡಿಸಿದರು.
ಮತ್ತಷ್ಟು ವಿಕೇಟ್ ಗಳು ಬೀಳುತ್ತವೆ ಎಂದು ಸ್ಫೋಟಕ ಹೇಳಿಕೆ ನೀಡಿದ ಅವರು, ಬಸವರಾಜ ರಾಯರೆಡ್ಡಿ ಇಸ್ಲಾಂ ಧರ್ಮದ ಪರ ಇದ್ದಾರೆ. ಉಳಿದ ಧರ್ಮಗಳು, ಧರ್ಮಗಳೆ ಅಲ್ವಾ? ಬಸವರಾಜ ರಾಯರೆಡ್ಡಿ ಕೂಡ ಸಂಪುಟದಲ್ಲಿರಲು ಅರ್ಹರಲ್ಲ. ಬಸವರಾಜ್ ರಾಯರೆಡ್ಡಿ ರಾಜೀನಾಮೆ ನೀಡಬೇಕು. ಇಲ್ಲಾ ಕಾಂಗ್ರೆಸ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ರು.
