ನವದೆಹಲಿ: ಉಕ್ರೇನ್ ವಿರುದ್ಧದ ಸಂಘರ್ಷ (Ukraine War) ಕೊನೆಗೊಳಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಕಿರ್ಗಿಸ್ತಾನ್ನ ಬಿಷ್ಕೆಕ್ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಹೊರತಾಗಿ ಪುಟಿನ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗಿನ ಮೋದಿ ಅವರ ಸಭೆಗಳ ಕುರಿತು ಮಿಸ್ರಿ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ಅವರ ಸಂದೇಶದ ಬಗ್ಗೆ ವಿವರಿಸುತ್ತಾ, ಸಂಘರ್ಷದಲ್ಲಿ ಪಾಲುದಾರರು ಮಂಡಿಸಿದ ಶಾಂತಿ ಉಪಕ್ರಮಗಳನ್ನ ಭಾರತ ನಿರಂತರವಾಗಿ ಬೆಂಬಲಿಸುತ್ತಿದೆ. ನಾವು ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿರುವ ನಮ್ಮ ಇಚ್ಛೆಯನ್ನು ಪ್ರಧಾನಿಗಳು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಮಿಸ್ರಿ ಹೇಳಿದ್ದಾರೆ.
ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಸಾಧ್ಯವಾದಾಗಲೆಲ್ಲಾ ಕ್ರಮ ಕೈಗೊಳ್ಳಲು ಭಾರತದ ಸಿದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಅದೇ ರೀತಿ ಈ ಸಂಘರ್ಷವನ್ನು ಅಂತ್ಯದತ್ತ ಕೊಂಡೊಯ್ಯಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿಗಳು ಅಧ್ಯಕ್ಷ ಪುಟಿನ್ ಅವರಿಗೆ ಪುನರುಚ್ಚರಿಸಿದ್ದಾರೆ. ಏಕೆಂದ್ರೆ ಇದು ಜಾಗತಿಕ ಸಮುದಾಯದ ಮೇಲೆ ಭಾರೀ ಹಾನಿ ಉಂಟುಮಾಡುತ್ತಿದೆ ಎಂದು ಪ್ರಧಾನಿಗಳು ಹೇಳಿರುವುದಾಗಿ ಮಿಶ್ರಿ ಹೇಳಿದ್ದಾರೆ.

ಟಿನ್ಗೆ ಮೋದಿ ಸಂದೇಶ ಏನು?
ನಿನ್ನೆ ಕಿರ್ಗಿಸ್ತಾನ್ ಭೇಟಿ ಸಂದರ್ಭದಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷರಿಗೆ ಮತ್ತೆ ಶಾಂತಿಪಾಠ ಹೇಳಿದರು. ʻʻಯುದ್ಧಕ್ಕಾಗಿ ಖರ್ಚು ಮಾಡುವ ಪ್ರತಿ ದಿನವೂ ಮಾನವೀಯತೆಯನ್ನ ಹಿಂದೆ ಸರಿಯುತ್ತದೆ. ಹಾಗಾಗಿ ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದ ಕಡೆಗೆ ಸಾಗಬೇಕುʼ ಎಂದು ಕರೆ ನೀಡಿದರು.
ಸಂಘರ್ಷಗಳನ್ನು ಪರಿಹರಿಸುವಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆ ಕೇಂದ್ರವಾಗಿದೆ ಎಂಬ ಭಾರತದ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ವಾರ್ಷಿಕ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ಭಾರತಕ್ಕೆ ಪ್ರಯಾಣಿಸುವ 1 ವಾರಕ್ಕೂ ಮುನ್ನವೇ ಉಭಯ ನಾಯಕರ ನಡುವೆ ಈ ಮಾತುಕತೆಗಳು ನಡೆದಿವೆ.
