– ಕಾವೇರಿ ವಿಚಾರಣೆ 1 ವಾರಕ್ಕೆ ಮುಂದೂಡಿದ ಸುಪ್ರೀಂ
ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಿಂದಲೂ (Supreme Court) ಆಘಾತ ಎದುರಾಗಿದೆ. ಕಾವೇರಿ ವಿಚಾರಣೆಯನ್ನು ಒಂದು ವಾರಕ್ಕೆ ಸುಪ್ರೀಂ ಮುಂದೂಡಿದೆ. ಅಲ್ಲದೇ, CWMA ಆದೇಶ ಪಾಲಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದೆ.
ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಇಂದು ನಡೆಸಿತು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು

ತಮಿಳುನಾಡು ವಾದ ಏನು?
CWMA ನಿರ್ದೇಶನಗಳ ಹೊರತಾಗಿಯೂ, ಅದನ್ನು ಪಾಲಿಸಲಾಗುತ್ತಿಲ್ಲ. ನಮಗೆ ನೀರಿನ ಹರಿವು ಕಾಣಿಸುತ್ತಿಲ್ಲ. ಇದರಿಂದ ರೈತರಿಗೆ ನೀರು ಬಿಡಲು ನಮಗೆ ಸಾಧ್ಯವಾಗುತ್ತಿಲ್ಲ. ಇಂದು ಬೆಳಗ್ಗೆಯ ಹೊತ್ತಿಗೆ ಜಲಾಶಯದಲ್ಲಿ ಶೇ.76 ರಷ್ಟು ನೀರು ಸಂಗ್ರಹವಾಗಿದೆ. ಕೋರ್ಟ್ ತೀರ್ಪಿನ ಪ್ರಕಾರ 64 ಟಿಎಂಸಿ ನೀರು ಬರಬೇಕಿತ್ತು. ನಮಗೆ ಕೇವಲ 14 ಟಿಎಂಸಿ ನೀರು ಬಂದಿದೆ. ಮಳೆಯ ಕೊರತೆ ಪರಿಗಣಿಸಿದರೂ ಅರ್ಧದಷ್ಟು ನೀರು ಹರಿಸಬೇಕಿತ್ತು ಎಂದು ತಮಿಳುನಾಡು ವಾದ ಮಂಡಿಸಿತು.
ಕರ್ನಾಟಕ ವಾದ ಏನು?
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅನಿಶ್ಚಿತತೆಯಿಂದ ಕೂಡಿದೆ. ಅಗಾಧ ಪ್ರಮಾಣದಲ್ಲಿ ಮಳೆಯ ಕೊರತೆಯಾಗಿದೆ. CWMA ಎರಡು ಆದೇಶಗಳನ್ನು ನೀಡಿದೆ. 3500 ಕ್ಯೂಸೆಕ್ ಮತ್ತು 12000 ಕ್ಯೂಸೆಕ್ ನೀರು ಹರಿಸಲು ನಿರ್ದೇಶಿಸಿದೆ. ನಾವು 3500 ಕ್ಯೂಸೆಕ್‌ಗಿಂತಲೂ ಹೆಚ್ಚಿನ ನೀರು ಹರಿಸಿದ್ದೇವೆ. ನಾವು ನೀರು ಹರಿಸಿಲ್ಲ ಎನ್ನುವ ವಾದ ಸುಳ್ಳು. ಎರಡನೇ ಆದೇಶದ ಅನ್ವಯ ನಾವು ಕೆಆರ್‌ಎಸ್‌ನಿಂದ ನೀರು ಬಿಟ್ಟಿದ್ದೇವೆ. ಬಿಳಿಗುಂಡ್ಲು ತಲುಪಲು 48 ಗಂಟೆಗಳು ಬೇಕು ಎಂದು ಕರ್ನಾಟಕ ವಾದಿಸಿತು. ಇದನ್ನೂ ಓದಿ: ಹಿಡಕಲ್ ಜಲಾಶಯ ಭರ್ತಿ – ಇಂದು ಮಧ್ಯಾಹ್ನ ನೀರು ಬಿಡುಗಡೆ ಸಾಧ್ಯತೆ
ವಾದ-ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ನೀರು ಹರಿಯುವಿಕೆ ಖಚಿತಪಡಿಸಲು ಸಮಯ ಬೇಕು. ನಾವು ಒಂದು ವಾರಕ್ಕೆ ವಿಚಾರಣೆ ಮುಂದೂಡುತ್ತೇವೆ. ಮುಂದಿನ ವಾರ ಅಂಕಿ ಅಂಶಗಳೊಂದಿಗೆ ಬನ್ನಿ. CWMA ಆದೇಶವನ್ನು ಅನುಸರಿಸಿ ಎಂದು ಕರ್ನಾಟಕಕ್ಕೆ ಸೂಚನೆ ನೀಡಿದೆ.

