ಬೆಂಗಳೂರು: ಶ್ರಾವಣ ಮಾಸದ ದೊಡ್ಡ ಹಬ್ಬ ವರಮಹಾಲಕ್ಷ್ಮಿ (Varamahalakshmi Festival) ಹಬ್ಬ ಶುರುವಾಗಿದೆ. ಹಬ್ಬದ ಖರೀದಿಗೆ ಬೆಂಗಳೂರಿನ ಮಾರ್ಕೆಟ್‌ಗೆ ಜನಸಾಗರವೇ ಹರಿದು ಬರ್ತಿದೆ. ಅದರಲ್ಲೂ ಕೆ.ಆರ್ ಮಾರ್ಕೇಟ್‌ನಲ್ಲಂತೂ ಹೂವು, ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಹೂವಿನ ಮಾರ್ಕೆಟ್‌ನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಲಗ್ಗೆಯಿಟ್ಟಿದ್ದಾರೆ. ಸಾವಿರದ ಗಟಿದಾಡಿದೆ ಹೂವುಗಳ ಬೆಲೆ. ಇದರ ಮಧ್ಯೆಯೂ ಬೆಂಗಳೂರಲ್ಲಿ ಜನ ಸಂಭ್ರಮದಿಂದ ಹಬ್ಬ ಆಚರಣೆಗೆ ಸಿದ್ಧರಾಗಿದ್ದಾರೆ.
ಹಣ್ಣುಗಳ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಸೇಬು 200 ರೂಪಾಯಿಯಿಂದ 250 ರೂಪಾಯಿವರೆಗೂ ಏರಿಕೆಯಾಗಿದೆ. ಎಲ್ಲಾ ಹಣ್ಣುಗಳ ಬೆಲೆಯಲ್ಲೂ 10-20 ರೂಪಾಯಿವರೆಗೂ ಹೆಚ್ಚಾಗಿದೆ. ಈ ಬಾರಿಯ ಬೆಲೆ ಏರಿಕೆ ಜನರಿಗೆ ಸ್ವಲ್ಪ ಮಟ್ಟಿಗೆ ಹೊರೆಯಾಗಲಿದೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ- ಆಚರಣೆ, ವ್ರತ ಹೇಗೆ ಮಾಡಬೇಕು?
ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ಮನೆ-ಮನೆಗಳಲ್ಲೂ ಸಿದ್ಧತೆ ಜೋರಾಗಿದೆ. ಹೂಗಳ ಖರೀದಿಯೂ ಭರ್ಜರಿಯಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯಲ್ಲಿ ಹೂಗಳ ಬೆಲೆ ಗಗನಕ್ಕೇರಿದೆ. ಹೂ ಬೆಳೆಗಾರರಿಗೆ ವರಮಹಾಲಕ್ಷ್ಮೀ ಹಬ್ಬ ವರದಾನವಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆ ಹೂಗಳಿಗೆ ಭಾರೀ ಬೆಲೆ ಬಂದಿದೆ. ಗುಲಾಬಿ, ಸೇವಂತಿಗೆ, ಕನಕಾಂಬರ, ಮಲ್ಲಿಗೆ ಎಲ್ಲಾ ಬಗೆಯ ಹೂಗಳ ಬೆಲೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಇದರಿಂದ ಹೂ ಬೆಳೆದ ರೈತರಿಗೆ ವರಮಹಾಲಕ್ಷ್ಮಿ ವರ ತಂದಿದೆ. ರೈತರ ಕೈ ತುಂಬ ಕಾಸು ಸೇರುತ್ತಿದೆ.
ಕೋಲಾರದಲ್ಲಿಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಹೂವು-ಹಣ್ಣು ಸೇರಿದಂತೆ ವಿವಿದ ವಸ್ತುಗಳ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಕೋಲಾರದ ಮಾರುಕಟ್ಟೆಯಲ್ಲಿ ಒಂದು ಕೆಜಿ ಕನಕಾಂಬರ ಹೂವಿನ ಬೆಲೆ ಬರೋಬ್ಬರಿ 4000 ರೂಪಾಯಿ ಇದ್ದರೆ, ಮಲ್ಲಿಗೆ ಹೂವು 3000 ರೂಪಾಯಿ ಇದೆ. ಹಿಂದೆಂದೂ ಕಾಣದ ರೀತಿಯಲ್ಲಿ ಬೆಲೆ ಏರಿಕೆಯಾಗಿದೆ. ಅದ್ದೂರಿಯಾಗಿ ಹಬ್ಬ ಮಾಡಬೇಕೆಂದುಕೊಂಡಿದ್ದ ಮಹಿಳೆಯರಿಗಂತೂ ಸದ್ಯ ಲಕ್ಷ್ಮೀ ಪೂಜೆ ಮಾಡಿದರೆ ಸಾಕು ಎನ್ನುವಂತಾಗಿದೆ. ಇದನ್ನೂ ಓದಿ: ಶ್ರೀರಂಗನಾಥ ದೇವಾಲಯಕ್ಕೆ 66 ಲಕ್ಷ ರೂ.ನ ಬಂಗಾರದ ಕಲಶ ಕೊಟ್ಟ ಉದ್ಯಮಿ

