ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ವಿಬಿಜಿ ರಾಮ್‌ಜಿ (VB GRAMG) ಅಡಿ ಕೆಲಸ ಮಾಡಿದವರಿಗೆ 15 ದಿನವಾದರೂ ಕೂಲಿ ಹಣ ಪಾವತಿಯಾಗದಿದ್ದರೆ, ಸಂಬಂಧಿತ ಪಿಡಿಒಗಳನ್ನೇ ಹೊಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ಎಚ್ಚರಿಕೆ ನೀಡಿದರು.

ವಿಕಾಸಸೌಧದಲ್ಲಿಂದು ಹಿರಿಯ ಅಧಿಕಾರಿಗಳು ಹಾಗೂ ಚಾಮರಾಜನಗರ (Chamarajanagara) ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗ್ರಾಮೀಣ ಭಾಗದಲ್ಲಿ ಖಾಸಗಿ ಕೆಲಸ ಮಾಡುವ ಕೂಲಿಯಾಳುಗಳಿಗೆ ದೈನಂದಿನ ಆಧಾರದಲ್ಲಿ ಇಲ್ಲವೇ ವಾರಕ್ಕೆ ಒಮ್ಮೆ ಕೂಲಿ ಹಣ ಪಾವತಿ ಆಗುತ್ತದೆ. ಆದರೆ ವಿಬಿ ಜಿರಾಮ್‌ಜಿ ಅಡಿ 15-20 ದಿನವಾದರೂ ಹಣ ಬಾರದಿದ್ದರೆ ಜನ ಕೆಲಸಕ್ಕೆ ಬರುವುದಿಲ್ಲ. ಕನಿಷ್ಠ 7 ಗರಿಷ್ಠ 10 ದಿನಗಳ ಒಳಗೆ ಕೂಲಿ ಹಣ ಪಾವತಿಯಾಗುವಂತೆ ಕ್ರಮ ವಹಿಸಿ ಎಂದು ತಿಳಿಸಿದರು. ಇದನ್ನೂ ಓದಿ: 2024ರಿಂದಲೂ ಮೊಬೈಲ್ ಬಳಕೆ, 6 ಬಾರಿ ದಾಳಿಯಿಂದ ಬಚಾವ್ ಆಗಿದ್ದ ಪ್ರಜ್ವಲ್

ಕಷ್ಟಪಟ್ಟು ಕೂಲಿ ಮಾಡಿದವರಿಗೆ ನಿಗದಿತ ಕಾಲಮಿತಿಯಲ್ಲಿ ಕೂಲಿ ನೀಡದಿರುವುದು ಅಪರಾಧ ಎಂದು ಬಣ್ಣಿಸಿದ ಈಶ್ವರ ಖಂಡ್ರೆ, ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒಗಳ ಲಾಗಿನ್ ನಲ್ಲಿಯೇ ಇನ್ನೂ 57 ಲಕ್ಷ ರೂ. ಕಾಮಗಾರಿಯ ಕೂಲಿ ಪೆಂಡಿಂಗ್ ಇದೆ. ಕೂಡಲೇ ಈ ಎಲ್ಲ ಕೂಲಿ ಹಣ ಪಾವತಿಗೆ ಕ್ರಮ ಕೈಗೊಳ್ಳಿ ಎಂದು ಸಿಇಒಗೆ ಸೂಚನೆ ನೀಡಿದರು. ಇದನ್ನೂ ಓದಿ: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್ ಪಾಟೀಲ್ ಅವಿರೋಧ ಆಯ್ಕೆ
ಚಾಮರಾಜನಗರ ತಾಲೂಕು ಮಾದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿದ ಭೂಮಿಯಲ್ಲಿ ಜನರನ್ನ ಕೂರಿಸಿ ಫೋಟೋ ತೆಗೆಸಿ ಬೋಗಸ್ ಮಾನವ ದಿನ ಸೃಜನೆ ಮತ್ತು ನಕಲಿ ಬಿಲ್ ಮಾಡಿರುವ ಬಗ್ಗೆ ತಾವು ಕ್ರಮಕ್ಕೆ ಆದೇಶ ನೀಡಿದ್ದು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ತಾಕೀತು ಮಾಡಿದರು.

ಬೋಗಸ್ ಬಿಲ್ ಮತ್ತು ಕಳಪೆ ಕಾಮಗಾರಿಗೆ ಅವಕಾಶ ಇಲ್ಲ. ಇಂತಹ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಖಂಡ್ರೆ, ಗಡಿ ಜಿಲ್ಲೆ ಚಾಮರಾಜನಗರದಿಂದ ಯಾರೂ ಉದ್ಯೋಗ ಅರಸಿ ಗುಳೆ ಹೋಗದಂತೆ ಇರುವಲ್ಲಿಯೇ ಉದ್ಯೋಗ ನೀಡಬೇಕು. ಗುಣಮಟ್ಟದ ಶಾಶ್ವತ ಆಸ್ತಿ ನಿರ್ಮಾಣ ಮಾಡಬೇಕು ಎಂದರು.
ಸಾರ್ವಜನಿಕರಿಗೆ ಮನವಿ:
ಮನ್ರೇಗಾ ಈಗ ವಿಬಿ ಜಿರಾಮ್‌ಜಿ ಆಗಿದ್ದು, ಈ ಯೋಜನೆಯಡಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅವಕಾಶವಿದೆ. ಗ್ರಾಮೀಣ ಜನರು ತಮ್ಮ ಗ್ರಾಮದಲ್ಲಿ ಅಭಿವೃದ್ಧಿಗೆ ಒತ್ತಾಯಿಸಬೇಕು. ಯಾವುದೇ ಕಾರಣಕ್ಕೂ ನಕಲಿ ಬಿಲ್ ಮಾಡಲು ಸಹಕಾರ ನೀಡಬಾರದು ಎಂದು ಮನವಿ ಮಾಡಿದರು.
