– ಎಲ್ಲಾ ರಾಜ್ಯಗಳ ಬಾರ್ ಕೌನ್ಸಿಲ್‌ಗೆ ಆದೇಶ
ಹೈದರಾಬಾದ್: ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ (NALSAR), ಹೈದರಾಬಾದ್‌ನಿಂದ 2026ರಲ್ಲಿ ಕಾನೂನು ಪದವಿ ಪಡೆಯುವ ಯಾವುದೇ ವಿದ್ಯಾರ್ಥಿಯನ್ನ ಮುಂದಿನ ಆದೇಶದವರೆಗೆ ವಕೀಲರಾಗಿ ನೋಂದಾಯಿಸಬಾರದು ಎಂದು ಭಾರತೀಯ ಬಾರ್ ಕೌನ್ಸಿಲ್ (BCI) ಎಲ್ಲಾ ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ನಿರ್ದೇಶನ ನೀಡಿದೆ.

NALSAR ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದನ್ನ ಕೆಲ ವಿದ್ಯಾರ್ಥಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಬಾರ್ ಕೌನ್ಸಿಲ್ ಈ ಆದೇಶ ನೀಡಿದೆ.
BCI ಹೊರಡಿಸಿರುವ ಆದೇಶದಲ್ಲಿ, ಮುಂದಿನ ಆದೇಶದವರೆಗೆ, 2026ರಲ್ಲಿ NALSAR ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಯಾವುದೇ ವಿದ್ಯಾರ್ಥಿಯನ್ನ ಯಾವುದೇ ರಾಜ್ಯ ಬಾರ್ ಕೌನ್ಸಿಲ್ ವಕೀಲರಾಗಿ ನೋಂದಾಯಿಸಬಾರದು ಎಂದು ಸೂಚಿಸಿದೆ.

ಈ ನಿರ್ಧಾರದಿಂದ ಪ್ರಸಿದ್ಧ ಕಾನೂನು ಸಂಸ್ಥೆಯ 2026ರ ಪದವೀಧರರ ವೃತ್ತಿಜೀವನದ ಮೇಲೆ ಪರಿಣಾಮ ಬೀರುವ ಆತಂಕ ಮೂಡಿದೆ. ವಿಶೇಷವಾಗಿ ವಕೀಲರಾಗಿ ವೃತ್ತಿ ಆರಂಭಿಸಲು ಅಗತ್ಯವಿರುವ ರಾಜ್ಯ ಬಾರ್ ಕೌನ್ಸಿಲ್ ನೋಂದಣಿ ಸದ್ಯಕ್ಕೆ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳ ಮುಂದಿನ ವೃತ್ತಿಪರ ಅವಕಾಶಗಳ ಕುರಿತು ಪ್ರಶ್ನೆಗಳು ಎದ್ದಿವೆ.
NALSAR ಕುಲಪತಿಗೆ ವರದಿ ನೀಡುವಂತೆ ಸೂಚನೆ
ಘಟಿಕೋತ್ಸವಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲಿ ನಡೆದ ಬೆಳವಣಿಗೆಗಳ ಕುರಿತು ವರದಿ ಸಲ್ಲಿಸುವಂತೆ BCI, NALSARನ ಉಪಕುಲಪತಿಗೆ ಸೂಚಿಸಿದೆ.
BCI ಕಾರ್ಯಕಾರಿ ಸಮಿತಿಯ ಸದಸ್ಯ ವಕೀಲ ವಿ.ಪಿ. ಶರ್ಮಾ ಅವರು ಹೇಳುವಂತೆ, ಕಾರ್ಯಕಾರಿ ಸಮಿತಿಯ ಅನುಮೋದನೆಯೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಈ ಕ್ರಮ ಅಗತ್ಯವಾಗಿತ್ತು. ಈ ಹಂತದಲ್ಲಿ ವಿಶ್ವವಿದ್ಯಾಲಯದಿಂದ ವರದಿ ಮಾತ್ರ ಕೇಳಲಾಗಿದೆ. ತನಿಖೆಯಲ್ಲಿ ಯಾವುದೇ ಶಿಸ್ತುಭಂಗ ನಡೆದಿಲ್ಲ ಎಂಬುದು ಕಂಡುಬಂದರೆ, ವಿದ್ಯಾರ್ಥಿಗಳ ವಕೀಲರ ನೋಂದಣಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.
BCI ನಿರ್ಧಾರವನ್ನು ಪ್ರಶ್ನಿಸಲು ಬಯಸುವವರಿಗೆ ಕಾನೂನುಬದ್ಧವಾಗಿ ಅದನ್ನು ಪ್ರಶ್ನಿಸುವ ಅವಕಾಶವಿದೆ ಎಂದೂ ಶರ್ಮಾ ತಿಳಿಸಿದ್ದಾರೆ.
ಸಿಜೆಐ ಆಹ್ವಾನಕ್ಕೆ ವಿದ್ಯಾರ್ಥಿಗಳ ವಿರೋಧ
NALSARನ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ ಬಳಿಕ ವಿವಾದ ಆರಂಭವಾಯಿತು. ಅವರ ಭಾಗವಹಿಸುವಿಕೆಗೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ NALSARನಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.
ಇದೀಗ BCIನ ಆದೇಶದಿಂದ 2026ರ ಬ್ಯಾಚ್‌ನ ಪದವೀಧರರ ವಕೀಲರಾಗಿ ನೋಂದಣಿ ಪ್ರಕ್ರಿಯೆ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ.
