– ಈಗಾಗಲೇ ಅವರು ನಮ್ಮ ಸಂಪರ್ಕದಲ್ಲೇ ಇದ್ದಾರೆ
ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ನ ಅಸಮಾಧಾನಿತರ ದೊಡ್ಡ ತಂಡ ಬಿಜೆಪಿಗೆ ಬರಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ್ (Murugesh Nirani) ನಿರಾಣಿ ಹೇಳಿದ್ದಾರೆ.
ಗದಗನಲ್ಲಿ (Gadag) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ನಂತರ ಏನೆಲ್ಲಾ ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾಯ್ದು ನೋಡಿ, ಅವರಲ್ಲೇ ಸಾಕಷ್ಟು ಗೊಂದಲಗಳು ಆಗುತ್ತವೆ. 2028ರ ಚುನಾವಣೆಯೊಳಗೆ ಕಾಂಗ್ರೆಸ್‌ನ ದೊಡ್ಡ ತಂಡ ಬಿಜೆಪಿಗೆ ಸೇರುತ್ತಾರೆ. ಈಗಾಗಲೇ ಅವರು ನಮ್ಮ ಸಂಪರ್ಕದಲ್ಲೇ ಇದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಸುಮಾರು 60 ಮಂದಿ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. ಆದರೆ, 20 ಮಂದಿಯಲ್ಲಿ 15 ಅಥವಾ 16 ಮಂದಿಯನ್ನು ಮಾತ್ರ ಸಚಿವರನ್ನಾಗಿ ಮಾಡಬಹುದು. ಉಳಿದವರಿಗೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್‌ನ ಹಿರಿಯ ಶಾಸಕರಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲವೂ ಗೊತ್ತಾಗುತ್ತಿದೆ. ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳದೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ನಮ್ಮ ಕಡೆಗೆ ಬರುತ್ತಾರೆ. ನಮ್ಮಲ್ಲಿರುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ, ಆ ಕ್ಷೇತ್ರದ ಜನರ ವಿಶ್ವಾಸ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 1.09 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಹಂಚಿಕೆ – ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?
2028ರವರೆಗೆ ಅವರು ಸರ್ಕಾರ ನಡೆಸಲಿ. 2028ರಲ್ಲಿ ಇನ್ನಷ್ಟು ಶಕ್ತಿ ಹಾಕಿ, ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ಸದ್ಯ ಸರ್ಕಾರ ಬೀಳಬಾರದು ಎಂಬ ಭಾವನೆ ನಮ್ಮದೂ ಇದೆ. ಆದರೆ, ಅವರೊಳಗಿನ ಕಚ್ಚಾಟದಿಂದ ಏನಾದರೂ ಬೆಳವಣಿಗೆ ನಡೆದರೆ ನಾವು ಏನೂ ಮಾಡಲಾಗುವುದಿಲ್ಲ. ಅದರಲ್ಲಿ ಬಿಜೆಪಿಯ ಯಾವುದೇ ಪಾತ್ರ ಇರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ದರೋಡೆ ಪ್ರಕರಣ; 37 ವರ್ಷಗಳ ಬಳಿಕ ಆರೋಪಿ ಅರೆಸ್ಟ್
