ಶಿವಮೊಗ್ಗ: ಸುಮಾರು 37 ವರ್ಷಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿವಮೊಗ್ಗ(shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತನನ್ನು ಮಂಗಳೂರಿನ ಅಬ್ದುಲ್ ಖಾದರ್ ಅಲಿಯಾಸ್ ಮೊಣು (57) ಎಂದು ಗುರುತಿಸಲಾಗಿದೆ. 1989ರಲ್ಲಿ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಗ್ರಾಮದ ಗುಡ್ಡೆಕೊಪ್ಪದಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಆತ ಪ್ರಮುಖ ಆರೋಪಿಯಾಗಿದ್ದ. ಘಟನೆ ಬಳಿಕ ಆತ ಪರಾರಿಯಾಗಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಇತ್ತೀಚೆಗೆ ಆರೋಪಿ ಕೇರಳದ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಪುರ ಸಂಗೋಡಿಯ ಪಾಡಿಯಲ್ಲಿ ವಾಸಿಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಮಾಳೂರು ಪೊಲೀಸ್ ತಂಡ ಕೇರಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಬಳಿಕ ಆರೋಪಿಯನ್ನು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: CWG 2026: ಶಾಟ್‌ಪುಟ್‌ನಲ್ಲಿ ಭಾರತಕ್ಕೆ ಡಬಲ್ ಸಂಭ್ರಮ – ಸೋಮನ್‌ಗೆ ಚಿನ್ನ, ಶುಭಮ್‌ಗೆ ಬೆಳ್ಳಿ
ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಎ.ಜಿ. ಹಾಗೂ ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್‌ಪಿ ಅರವಿಂದ ಕಲಗುಚ್ಚಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಮಾಳೂರು ಠಾಣೆ ಇನ್ಸ್‌ಪೆಕ್ಟರ್ ರಾಜಶೇಖರ್, ಪಿಎಸ್‌ಐ ಸುನಿಲ್ ಬಿ.ಸಿ. ಹಾಗೂ ಸಿಬ್ಬಂದಿ ಮೇಘರಾಜ್ ಮತ್ತು ಅಭಿಲಾಶ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌ಗೆ ವಿರೋಧ – ಪಾದಯಾತ್ರೆಗೆ ಜೆಡಿಎಸ್‌ನಿಂದ ಹೊಸ ದಿನಾಂಕ ನಿಗದಿ
