– ಅಕ್ರಮ ಒತ್ತುವರಿ ಆರೋಪ; ದಿ ಆರ್ಟ್ ಆಫ್ ಲಿವಿಂಗ್ ಸ್ಪಷ್ಟನೆ ಏನು?
ಬೆಂಗಳೂರು: ದಲಿತರ ಭೂಮಿಯನ್ನು ಅಕ್ರಮವಾಗಿ ಸ್ವಾಧೀನ ಮಾಡಿಕೊಂಡಿರೋ ಆರೋಪದ ಮೇಲೆ ಆರ್ಟ್ ಆಫ್ ಲೀವಿಂಗ್ (Art of Living) ಸಂಸ್ಥೆ ವಿರುದ್ಧ ತನಿಖೆಗೆ ಸರ್ಕಾರ SIT ರಚನೆ ಮಾಡಿದೆ.
ಬೆಂಗಳೂರು (Bengaluru) ವಿಭಾಗದ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ SIT ರಚನೆ ಮಾಡಲಾಗಿದೆ. ಇದನ್ನೂ ಓದಿ: ಫುಟ್ಪಾತ್ ತೆರವಿಗೆ ಜನರು ಸಹಕಾರ ಕೊಡಬೇಕು: ಪರಮೇಶ್ವರ್

ವಿಧಾನಸೌಧದಲ್ಲಿ (Vidhana Soudha) ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಪರಮೇಶ್ವರ್, ರವಿಶಂಕರ್ ಗೂರೂಜಿ ಅವರ ನೇತೃತ್ವದ ಆರ್ಟ್ ಆಫ್ ಲೀವಿಂಗ್ ಸಂಸ್ಥೆ ದಲಿತರಿಗೆ ಸೇರಿದ 150 ಎಕರೆ ಜಾಗ ಅಕ್ರಮವಾಗಿ ಸ್ವಾಧೀನ ಮಾಡಿಕೊಂಡಿದ್ದಾರೆ ಅಂತ ದೂರು ಬಂದಿದೆ. ದಲಿತ ಸಂಘಟನೆಗಳು ಹಾಗೂ ಸಾರ್ವಜನಿಕರು ದೂರು ಕೊಟ್ಟಿದ್ದರು. ದೂರಿನ ಅನ್ವಯ ಈಗ SIT ರಚನೆ ಮಾಡಲಾಗಿದೆ. ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಅಕ್ರಮವಾಗಿದ್ದರೆ ಕ್ರಮ ಆಗುತ್ತದೆ ಅಂತ ತಿಳಿಸಿದರು. ಇದನ್ನೂ ಓದಿ: ಶಿವಾಜಿನಗರದಲ್ಲಿ ಫುಟ್ಪಾತ್ ತೆರವು ವೇಳೆ ಪುಂಡರ ಅಟ್ಟಹಾಸ: ಜಿಬಿಎ ಅಧಿಕಾರಿಗಳ ಮೇಲೆ ಭೀಕರ ಹಲ್ಲೆ, ಪೆಪ್ಪರ್ ಸ್ಪ್ರೇ
ದಿ ಆರ್ಟ್ ಆಫ್ ಲಿವಿಂಗ್ ಸ್ಪಷ್ಟನೆ
ಎಸ್ಐಟಿ (SIT) ರಚನೆಯನ್ನು ನಾವು ಸ್ವಾಗತಿಸುತ್ತೇವೆ. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯು ಸತ್ಯಾಂಶಗಳನ್ನು ಹೊರಹಾಕುತ್ತದೆ ಮತ್ತು ಈ ವಿಷಯಕ್ಕೆ ಒಂದು ನಿರ್ಣಾಯಕ ಅಂತ್ಯವನ್ನು ನೀಡುತ್ತದೆ ಎಂಬ ನಂಬಿಕೆ ನಮಗಿದೆ. ನಮ್ಮ ವಿರುದ್ಧ ಮಾಡಲಾದ ಆರೋಪಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಯಾವುದೇ ಒತ್ತುವರಿ ಮಾಡಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಕ್ರಮದ ಎಲ್ಲಾ ಆರೋಪಗಳನ್ನು ನಾವು ಸಂಪೂರ್ಣವಾಗಿ ತಳ್ಳಿಹಾಕುತ್ತೇವೆ. ವಾಸ್ತವವಾಗಿ, ನಾಲ್ಕೈದು ತಿಂಗಳ ಹಿಂದೆ ನಡೆದ ಸರ್ಕಾರಿ ಸಮೀಕ್ಷೆಯಲ್ಲಿ, ಸರ್ಕಾರ ನಮಗೆ ಮಂಜೂರು ಮಾಡಿದ 60 ಎಕರೆ ಜಮೀನಿನ ಪೈಕಿ ನಮ್ಮ ವಶದಲ್ಲಿರುವುದು ಕೇವಲ 36 ಎಕರೆಗಳಷ್ಟು ಮಾತ್ರ ಎಂಬುದು ದೃಢಪಟ್ಟಿದೆ. ಇನ್ನುಳಿದ 24 ಎಕರೆಗಳನ್ನು ಸರ್ಕಾರ ನಮಗೆ ಹಸ್ತಾಂತರಿಸಬೇಕಿದೆ.
ಈ ಎಲ್ಲಾ ನಡಾವಳಿಗಳು ದುರುದ್ದೇಶದಿಂದ ಕೂಡಿದ್ದು, ಒಬ್ಬ ವಿಧಾನ ಪರಿಷತ್ ಸದಸ್ಯರು (MLC) ಉದ್ದೇಶಪೂರ್ವಕವಾಗಿ ನಮ್ಮನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ಈ ಬೆಳವಣಿಗೆಗೆ ಪ್ರಚೋದನೆ ನೀಡಿದ್ದಾರೆ. ಸದರಿ ಎಂಎಲ್ಸಿಯವರು ಈಗಾಗಲೇ ಗಂಭೀರ ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ. ಕೆಲವು ವ್ಯಕ್ತಿಗಳು ನಮ್ಮಿಂದ ಸುಲಿಗೆಗೆ ಯತ್ನಿಸಿರುವರೆಂಬ ನಮ್ಮ ಆರೋಪವನ್ನು ದೃಢೀಕರಿಸುವ ಫೋನ್ ರೆಕಾರ್ಡಿಂಗ್ಗಳು ನಮ್ಮ ಬಳಿ ಇವೆ. ಈ ವ್ಯಕ್ತಿಗಳು ಸ್ಥಳೀಯ ನಿವಾಸಿಗಳಲ್ಲ. ಅವರು ಹಣ ಸುಲಿಗೆ ಮಾಡುವ ಉದ್ದೇಶದಿಂದಲೇ ಹೊರಗಿನಿಂದ ಬಂದಿದ್ದಾರೆ. ನಾವು ಎಲ್ಲಾ ಸಂಬಂಧಿತ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದೇವೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು, ಸತ್ಯವೇ ಜಯಿಸಲಿದೆ ಎಂಬ ದೃಢ ನಂಬಿಕೆ ನಮ್ಮದು ಎಂದು ಆರ್ಟ್ ಆಫ್ ಲಿವಿಂಗ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

