ಕೀವ್: ಉಕ್ರೇನ್ನ ಪ್ರಮುಖ ಬಂದರು ನಗರವಾದ ಒಡೆಸಾ (Ukraine’s, Odesa Port) ಸಮೀಪ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯರು ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಕಾಸರಗೋಡು (Kasaragod) ಮೂಲದ ವ್ಯಕ್ತಿ ಸೇರಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
ಕಾಸರಗೋಡಿನ ವ್ಯಾಪಾರಿ ನೌಕಾಪಡೆಯ ಉದ್ಯೋಗಿ ಅಖಿಲ್ ಜೋಯಾನ್ (26) ಮೃತ ವ್ಯಕ್ತಿ. ಸಾವನ್ನಪ್ಪಿದ ಇತರ ಭಾರತೀಯರ (Indians) ವಿವರಗಳು ಇನ್ನೂ ಲಭ್ಯವಿಲ್ಲ. ಅಖಿಲ್ ಕಾಸರಗೋಡಿನ ವೆಲ್ಲರಿಕುಂಡು ಮೂಲದ ಜೋಯಾನ್ ಮತ್ತು ಸ್ಯಾಲಿ ದಂಪತಿಯ ಪುತ್ರ. ಮತ್ತೊಬ್ಬ ಭಾರತೀಯ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ರಷ್ಯಾ–ಉಕ್ರೇನ್ ಯುದ್ಧದ ನಡುವೆ ಈ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಭಾರತ ಸರ್ಕಾರ (Indian Govt) ತೀವ್ರವಾಗಿ ಖಂಡಿಸಿದೆ. ಭಾರತೀಯರಿದ್ದ ಹಡಗಿನ ಮೇಲೆ ದಾಳಿ ನಡೆಸಿರೋದು ಖಂಡನೀಯ ಮತ್ತು ಅತ್ಯಂತ ವಿಷಾದನೀಯ. ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು, ನಿರಪರಾಧಿ ನಾಗರಿಕ ಸಿಬ್ಬಂದಿಯನ್ನ ಕೊಲ್ಲುವುದು ಹಾಗೂ ಸಾಗರ ಮಾರ್ಗದ ಸ್ವಾತಂತ್ರ ವ್ಯಾಪಾರಕ್ಕೆ ಅಡ್ಡಿಪಡಿಸುವುದು ಖಂಡನೀಯ. ಇಂತಹ ದಾಳಿಗಳನ್ನ ತಕ್ಷಣವೇ ತಪ್ಪಿಸಬೇಕು ಆಗ್ರಹಿಸಿದೆ.
ಭಾರತ ಸರ್ಕಾರದ ಮಾಹಿತಿ ಪ್ರಕಾರ, ʻಎಂವಿ ಗೋಲ್ಡನ್ ಲಿಯೋ (MV GOLDEN LEO)’ ಎಂಬ ವಾಣಿಜ್ಯ ಹಡಗು ಒಡೆಸಾ ಬಂದರಿನಿಂದ ಹೊರಡುತ್ತಿದ್ದ ವೇಳೆ ದಾಳಿಗೆ ಗುರಿಯಾಗಿದೆ. ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದು, ಅವರಲ್ಲಿ ಐವರು ಭಾರತೀಯರು ಸೇರಿದ್ದರು. ಈ ಪೈಕಿ ನಾಲ್ವರು ಭಾರತೀಯರು ಸಾವನ್ನಪ್ಪಿದ್ದು, ಮತ್ತೊಬ್ಬ ಭಾರತೀಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವನ್ನ ನೀಡಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ಸರ್ಕಾರ ಸಂತಾಪ ಸೂಚಿಸಿದೆ. ಗಾಯಗೊಂಡಿರುವ ಭಾರತೀಯ ಸಿಬ್ಬಂದಿ ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸಿದೆ.
ಆರ್ಥಿಕ ಶಕ್ತಿಕೇಂದ್ರವಾಗಿದ್ದ ಬಂದರಿನಲ್ಲೇ ದಾಳಿ
ಉಕ್ರೇನ್ನ ಪ್ರಮುಖ ಸಮುದ್ರ ಬಂದರುಗಳಲ್ಲಿ ಒಂದಾದ ಒಡೆಸಾ, ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿಂದ ಧಾನ್ಯ, ಲೋಹ, ರಾಸಾಯನಿಕಗಳು ಸೇರಿದಂತೆ ಹಲವು ಸರಕುಗಳನ್ನು ಜಗತ್ತಿನ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ.
