ಡೆಹ್ರಾಡೂನ್: ಬದ್ರಿನಾಥ ದೇವಸ್ಥಾನದಲ್ಲಿ(Badrinath Temple) ಭಕ್ತರ ದೇಣಿಗೆ ಮತ್ತು ಕಾಣಿಕೆಗಳ ದುರ್ಬಳಕೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು (Uttarakhand Government) ಉನ್ನತ ಮಟ್ಟದ ಮೂರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ.
ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಪ್ರಕರಣದ ಸತ್ಯಾಸತ್ಯತೆ ಹೊರತರಲು ಹೈಕೋರ್ಟ್ನ(High Court) ನಿವೃತ್ತ ನ್ಯಾಯಾಧೀಶರ ನೇತೃತ್ವದ ಉನ್ನತ ಮಟ್ಟದ ಮೂರು ಸದಸ್ಯರ ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ದೇವಾಲಯದ ಹಣಕಾಸು ವಿಭಾಗದಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯು (BKTC) ಈಗಾಗಲೇ ಒಬ್ಬ ಹಿರಿಯ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಆರಂಭದಲ್ಲಿ ದೇವಸ್ಥಾನ ಸಮಿತಿಯೇ ನಾಲ್ಕು ಸದಸ್ಯರ ಆಂತರಿಕ ತನಿಖಾ ಸಮಿತಿಯನ್ನು ರಚಿಸಿತ್ತಾದರೂ, ಆರೋಪಿಗಳನ್ನು ರಕ್ಷಿಸುವ ತಂತ್ರ ಇದಾಗಿದೆ ಎಂದು ಭಕ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರವೇ ನೇರವಾಗಿ ಮಧ್ಯಪ್ರವೇಶಿಸಿ ಸ್ವತಂತ್ರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಸಮಿತಿಯ ಕೆಲಸ ಏನು?
ಕಳೆದ ಕೆಲವು ವರ್ಷಗಳಿಂದ ಭಕ್ತರಿಂದ ನಗದು, ಚಿನ್ನ, ಬೆಳ್ಳಿ ಹಾಗೂ ಆನ್ಲೈನ್ ಮೂಲಕ ಬಂದ ಒಟ್ಟು ಕಾಣಿಕೆಗಳ ನಿಖರ ಲೆಕ್ಕ ಪರಿಶೋಧನೆ ಮಾಡಲಿದೆ. ದೇವಸ್ಥಾನದ ಬ್ಯಾಂಕ್ ಖಾತೆಗಳು ಮತ್ತು ರಸೀದಿ ಪುಸ್ತಕಗಳಲ್ಲಿ ನಡೆದಿರುವ ತಿರುಚುವಿಕೆ ಹಾಗೂ ವ್ಯತ್ಯಾಸಗಳ ಪತ್ತೆ ಮಾಡಲಿದೆ.
ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗಲ್ಲದೆ ಭಕ್ತರ ಹಣವನ್ನು ವೈಯಕ್ತಿಕ ಅಥವಾ ಇತರೆ ಅನಧಿಕೃತ ಉದ್ದೇಶಗಳಿಗೆ ಬಳಸಲಾಗಿದೆಯೇ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಿದೆ.
ವಿಶ್ವವಿಖ್ಯಾತ ಬದ್ರಿನಾಥ ಧಾಮದ ಪಾವಿತ್ರ್ಯತೆ ಮತ್ತು ಭಕ್ತರ ನಂಬಿಕೆಗೆ ದಕ್ಕೆ ತರಲು ಯಾರನ್ನೂ ಬಿಡುವುದಿಲ್ಲ. ತನಿಖಾ ಸಮಿತಿಯು ನಿಗದಿತ ಅವಧಿಯೊಳಗೆ ವರದಿ ಸಲ್ಲಿಸಲಿದ್ದು, ದೇಣಿಗೆ ದುರ್ಬಳಕೆ ಆರೋಪ ಸಾಬೀತಾದರೆ ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗಟ್ಟಲಾಗುವುದು ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
ಚಾರ್ ಧಾಮ್ ಯಾತ್ರೆಯ ಪ್ರಮುಖ ಕೇಂದ್ರವಾಗಿರುವ ಬದ್ರಿನಾಥದ ಸುತ್ತ ಸದ್ಯ ಸೃಷ್ಟಿಯಾಗಿರುವ ಈ ಭ್ರಷ್ಟಾಚಾರದ ವಿವಾದವು ಉತ್ತರಾಖಂಡ ರಾಜಕಾರಣ ಹಾಗೂ ಧಾರ್ಮಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
