– ಯತ್ನಾಳ್ ವ್ಯಾಪಾರ ಆಗೋ ವ್ಯಕ್ತಿಯಲ್ಲ ಎಂದ ಮುನಿರತ್ನ
ಬೆಂಗಳೂರು: ಬಿಜೆಪಿ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮುಂದಾಗಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ (Legislative Council Election) ಮತದಾನಕ್ಕೆ ಮತ ಪತ್ರ ವಿತರಿಸುವ ವೇಳೆ ರಮೇಶ್ ಜಾರಕಿಹೊಳಿ ವಿಪಕ್ಷ ನಾಯಕ ಆರ್. ಅಶೋಕ್ ಬಳಿ ಬಂದು ನಾನು ಯಾರಿಗೆ ಮತ ಹಾಕಲಿ ಎಂದು ಕೇಳಿದ್ದಾರೆ. ಅಶೋಕ್ ಮತಪತ್ರ ಕೊಟ್ಟು ಅಭ್ಯರ್ಥಿಯ ಹೆಸರನ್ನ ಸೂಚಿಸಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ವಿಜಯೇಂದ್ರ ರಮೇಶಣ್ಣ ನನಗೊಂದು ಮತ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಮೆಶ್ ಜಾರಕಿಹೊಳಿ ಆಯ್ತು ಬಿಡಿ, ಹಾಕೋಣ ಎಂದಷ್ಟೇ ಹೇಳಿದ್ದಾರೆ.

ಉಚ್ಛಾಟಿತ ಶಾಸಕರೂ ಬಿಜೆಪಿಗೆ ಮತ
ರಾಜ್ಯಸಭಾ ಚುನಾವಣೆ ಬಗ್ಗೆ ಯಲಹಂಕ ವಿಧಾನಸಭಾ ಕ್ಷೇತ್ರ ಶಾಸಕ ಎಸ್.ಆರ್ ವಿಶ್ವನಾಥ್ ಮಾತನಾಡಿ, ನಮ್ಮ 3 ಜನ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಶಾಸಕರಲ್ಲಿ ಅಸಮಧಾನವಿದೆ. ಅವರಿಂದ ಅಡ್ಡ ಮತದಾನವಾಗಬಹುದು. ಆದರೆ ನಮ್ಮ ಶಾಸಕರಿಂದ ಯಾವ ಕಾರಣಕ್ಕೂ ಅಡ್ಡ ಮತದಾನ ನಡೆಯುವುದಿಲ್ಲ. ಉಚ್ಛಾಟಿತ ಶಾಸಕರು ಕೂಡ ಆತ್ಮಸಾಕ್ಷಿಯಿಂದ ಬಿಜೆಪಿಗೆ ಮತ ನೀಡುತ್ತಾರೆ. ನಮ್ಮ ಶಾಸಕರ ಹೆಚ್ಚುವರಿ ಮತಗಳನ್ನು ಯಾರು ಯಾರಿಗೆ ಹಾಕಬೇಕು ಅನ್ನೋದನ್ನು ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.
ಯತ್ನಾಳ್ ನಡೆಯನ್ನ ಸ್ವಾಗತ ಮಾಡ್ತೀವಿ
ಈ ಬಗ್ಗೆ ಮಾಜಿ ಸಚಿವ ಅರವಿಂದ್ ಬೆಲ್ಲದ್ ಮಾತನಾಡಿ, ನಮ್ಮ ಪಕ್ಷದಿಂದ ಉಚ್ಛಾಟನೆ ಆಗಿರೋ ಇಬ್ಬರ ಮತಗಳು ಕಾಂಗ್ರೆಸ್‌ಗೆ ಹೋಗಬಹುದು. ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಕೂಡ ಗೆಲ್ಲುತ್ತಾರೆ. ಯತ್ನಾಳ್ ಅವರಲ್ಲಿ ಹಿಂದುತ್ವ, ಬಿಜೆಪಿ ಇದೆ. ಯತ್ನಾಳ್ ಅವರ ನಡೆಯನ್ನು ಸ್ವಾಗತ ಮಾಡುತ್ತೇವೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಕೂಡ ಗೆಲ್ಲಿಸಿಕೊಳ್ಳುತ್ತೇವೆ ಎಂದಿದ್ದಾರೆ.

ನಾನು ಬಿಜೆಪಿ ಶಾಸಕನಾಗಿದ್ದೇನೆ
ಶಾಸಕ ಗಾಲಿ ಜನಾರ್ಧನ ರೆಡ್ಡಿ ಮಾತನಾಡಿ, ನಾನು ಪಕ್ಷೇತರ ಶಾಸಕ ಅನ್ನೋ ಪ್ರಶ್ನೆ ಉದ್ಭವ ಆಗಲ್ಲ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ನಾನು ಗೆದ್ದಿದ್ದೇನೆ. ಅಮಿತ್ ಶಾ ಅವರ ಸಮ್ಮುಖದಲ್ಲಿ ಪಕ್ಷದಲ್ಲಿ ವಿಲೀನ ಆಗಿರುವ ಕಾರಣ ಈಗ ಬಿಜೆಪಿ ಶಾಸಕನಾಗಿದ್ದೇನೆ. ಯತ್ನಾಳ್ ಪಕ್ಷದಿಂದ ಉಚ್ಛಾಟನೆ ಆಗಿದ್ದರೂ ಅವರು ಬಿಜೆಪಿ, ಮೋದಿ ಹಾಗೂ ದೇಶದ ಪರ ಇದ್ದಾರೆ ಎಂದು ತಿಳಿಸಿದ್ದಾರೆ.
ಯತ್ನಾಳ್ ವ್ಯಾಪಾರ ಆಗೋ ವ್ಯಕ್ಯಿಯಲ್ಲ
ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ನಮ್ಮ ಪಕ್ಷದ ಸೂಚನೆಯಂತೆ ಮತ ಚಲಾಯಿಸಿದ್ದೇನೆ. ಒಳ್ಳೆಯ ಅಭ್ಯರ್ಥಿಗಳನ್ನು ನಮ್ಮ ಪಕ್ಷ ಆಯ್ಕೆ ಮಾಡಿದೆ. ರಾಜ್ಯಕ್ಕೆ ಅವರಿಂದ ಮುಂದಿನ ದಿನಗಳಲ್ಲಿ ಉತ್ತಮ ಕೆಲಸಗಳಾಗುತ್ತವೆ ಎನ್ನುವ ವಿಶ್ವಾಸವಿದೆ. ಉಚ್ಛಾಟಿತ ಶಾಸಕ ಯತ್ನಾಳ್ ಪಕ್ಷದ ಚಿಹ್ನೆಯಡಿ ಗೆದ್ದಿದ್ದಾರೆ. ಹಾಗಾಗಿ ಅವರು ವ್ಯಾಪಾರ ಆಗೋ ವ್ಯಕ್ತಿಯಲ್ಲ. ಪಕ್ಷದ ಋಣದಲಿದ್ದಾರೆ. ಪಕ್ಷದ ಋಣ ತೀರಿಸುತ್ತಾರೆ ಎಂದಿದ್ದಾರೆ.
