ಪಾಟ್ನಾ: ಬಿಹಾರದಲ್ಲಿ (Bihar) ಪೊಲೀಸ್ ಇಲಾಖೆಯ ನೇಮಕಾತಿ ಪರೀಕ್ಷೆಗೆ ಕೇಂದ್ರಗಳಿಗೆ ತೆರಳಲು ರೈಲುಗಳ ಕೊರತೆ ಹಿನ್ನೆಲೆ ಅಭ್ಯರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ ಘಟನೆ ಬಿಹಾರದಲ್ಲಿ ಜರುಗಿದೆ. ರೈಲು ಸಂಚಾರ ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ.
ಅಭ್ಯರ್ಥಿಗಳ ಪ್ರತಿಭಟನೆಯಿಂದ ಪಾಟಲಿಪುತ್ರ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ಅವ್ಯವಸ್ಥೆ ಉಂಟಾಯಿತು. ರೈಲು ತಡೆದು ಕಲ್ಲು ತೂರಾಟ ನಡೆಸಿದರು. ಇದರಿಂದ ರೈಲು ನಿಲ್ದಾಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪ್ರತಿಭಟನಾಕಾರರನ್ನು ನಿಗ್ರಹಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಪೊಲೀಸ್ ಆಕಾಂಕ್ಷಿಗಳು ರೈಲ್ವೆ ಹಳಿಗಳಲ್ಲಿ ನಿಂತು, ರೈಲು ಸಂಚಾರವನ್ನು ತಡೆದು ಘೋಷಣೆಗಳನ್ನು ಕೂಗಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಇದರಿಂದಾಗಿ ರೈಲ್ವೆ ಮತ್ತು ಜಿಲ್ಲಾ ಅಧಿಕಾರಿಗಳು ಮಧ್ಯಪ್ರವೇಶಿಸಬೇಕಾಯಿತು. ನಂತರ ನಿಲ್ದಾಣದಲ್ಲಿ ಉದ್ವಿಗ್ನತೆ ಹೆಚ್ಚಾದ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ರೈಲು ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಅಭ್ಯರ್ಥಿಗಳನ್ನು ತಡೆಯಲು ಅಶ್ರುವಾಯು ಕೂಡ ಸಿಡಿಸಿದರು. ಇದನ್ನೂ ಓದಿ: Dehradun violence | ಬಿಜೆಪಿ ಮುಖಂಡನ ಹತ್ಯೆಯಿಂದ ಕೆರಳಿದ ಹಿಂದೂ ಸಂಘಟನೆಗಳು – 25 ಮಂದಿ ವಿರುದ್ಧ FIR
ಭಾನುವಾರ ಎರಡು ಪಾಳಿಗಳಲ್ಲಿ ನೇಮಕಾತಿ ಪರೀಕ್ಷೆ ನಡೆಯಬೇಕಿತ್ತು. ಶನಿವಾರ ರಾತ್ರಿ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ತಡರಾತ್ರಿ ನಿಲ್ದಾಣಕ್ಕೆ ಬಂದಿದ್ದರು. ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪ್ರಯಾಣಿಸುವ ನಿರೀಕ್ಷೆಯಿದ್ದರೂ, ಸಾಕಷ್ಟು ರೈಲು ವ್ಯವಸ್ಥೆಗಳನ್ನು ಮಾಡಲಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ನಿಲ್ದಾಣದಲ್ಲಿ ಜನಸಂದಣಿ ಹೆಚ್ಚುತ್ತಿದ್ದಂತೆ, ಆಕಾಂಕ್ಷಿಗಳಲ್ಲಿ ಹತಾಶೆ ಹೆಚ್ಚಾಯಿತು.
ಪಾಟಲಿಪುತ್ರ ಮತ್ತು ಕಟಿಹಾರ್ ನಡುವೆ ಚಲಿಸುವ ಪರೀಕ್ಷಾ ವಿಶೇಷ ರೈಲನ್ನು ಹತ್ತಲು ಅಭ್ಯರ್ಥಿಗಳು ಪ್ರಯತ್ನಿಸಿದಾಗ ಈ ಪ್ರಕೋಪ ಉಂಟಾಯಿತು. ರೈಲು ಹತ್ತಲು ದಟ್ಟಣೆ ಇದ್ದಾಗ ಗೊಂದಲ ಉಂಟಾಯಿತು. ಜನದಟ್ಟಣೆ ಅಶಾಂತಿಗೆ ಕಾರಣವಾಯಿತು. ನಂತರ ಕೋಪಗೊಂಡ ಅಭ್ಯರ್ಥಿಗಳು ರೈಲ್ವೆ ಹಳಿಗಳ ಮೇಲೆ ಕುಳಿತು ರೈಲನ್ನು ತಡೆದು ಆಕ್ರೋಶ ಹೊರಹಾಕಿದರು. ವಿಶೇಷ ರೈಲಿನೊಳಗೆ ಧ್ವಂಸ ಕೃತ್ಯಗಳು ನಡೆದಿವೆ ಎಂದು ವರದಿಯಾಗಿದೆ.
ದಾನಾಪುರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ರೈಲ್ವೆ ಅಧಿಕಾರಿಗಳು ನಿಲ್ದಾಣಕ್ಕೆ ಆಗಮಿಸಿ, ಹಳಿಗಳನ್ನು ತೆರವುಗೊಳಿಸಲು ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ಕೊನೆಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಯಿತು. ಅಭ್ಯರ್ಥಿಗಳನ್ನು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡಿತು. ಇದನ್ನೂ ಓದಿ: ಬೆಂಗಳೂರು ಪೊಲೀಸರು ರಾಜಸ್ಥಾನದಲ್ಲಿ ಟ್ರ‍್ಯಾಪ್ – ಆರೋಪಿ ಬಳಿ 2 ಲಕ್ಷಕ್ಕೆ ಬೇಡಿಕೆ ಇಟ್ಟು ಲಾಕ್
