ಚಂಡೀಗಢ: ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಸೆಕ್ಟರ್-11ರ ಮೆಡಿಕಲ್ ಸ್ಟೋರ್‌ನಲ್ಲಿ ಹಾಡಹಗಲೇ ಕ್ಯಾಷಿಯರ್‌ನನ್ನು (Cashier Murder) ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಹಿಮಾಚಲ ಪ್ರದೇಶದ (Himachal Pradesh) ರೋಹ್ರು ಮೂಲದ ಜಾನಕಿ ದಾಸ್ ಮೃತಪಟ್ಟ ವ್ಯಕ್ತಿ. ನಿನ್ನೆ ಶನಿವಾರ ಮಧ್ಯಾಹ್ನ ಸುಮಾರು 2:30ರ ವೇಳೆಗೆ ಮೂವರು ಬೈಕ್‌ನಲ್ಲಿ ಮೆಡಿಕಲ್ ಸ್ಟೋರ್‌ಗೆ ಬಂದಿದ್ದರು. ಅವರಲ್ಲಿ ಇಬ್ಬರು ಮುಖಕ್ಕೆ ಮಾಸ್ಕ್ ಧರಿಸಿ ಅಂಗಡಿಯೊಳಗೆ ಪ್ರವೇಶಿಸಿ ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಜಾನಕಿ ದಾಸ್ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಅಂಗಡಿಯೊಳಗೆ ನುಗ್ಗಿದ ಆರೋಪಿಗಳು, ಏಕಾಏಕಿ ಗನ್ ಹೊರತೆಗೆದು ಗುಂಡಿನ ದಾಳಿ ನಡೆಸಿದ್ದಾರೆ. ಅಂಗಡಿಯೊಳಗೆ ಒಟ್ಟು 13 ಬಾರಿ ಗುಂಡು ಹಾರಿಸಲಾಗಿದೆ. ಇದನ್ನೂ ಓದಿ: ದೀದಿಗೆ ಶಾಕ್ ಮೇಲೆ ಶಾಕ್ – ಟಿಎಂಸಿಗೆ ಮಾಜಿ ಸಚಿವ ರಾಜೀನಾಮೆ, ಅಮಿತ್ ಶಾ ಭೇಟಿಯಾದ ಪಕ್ಷದ ಎಂಪಿ
ಘಟನೆಯ ಬಳಿಕ ಆರೋಪಿಗಳು ಹೊರಗೆ ಕಾಯುತ್ತಿದ್ದ ಮತ್ತೊಬ್ಬನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಕ್ಯಾಷಿಯರ್ ಮಾತ್ರ ಗುರಿಯಾಗಿದ್ದು, ಅಂಗಡಿಯಲ್ಲಿದ್ದ ಇತರರಿಗೆ ಯಾವುದೇ ಹಾನಿಯಾಗಿಲ್ಲ. ಇದರಿಂದ ಇದು ಉದ್ದೇಶಿತ ಹತ್ಯೆಯಾಗಿರಬಹುದು ಎಂಬ ಅನುಮಾನ ಮೂಡಿದೆ.
ಘಟನೆ ನಡೆದ ಸ್ಥಳವು ಚಂಡೀಗಢದ (Chandigarh) ಪ್ರಸಿದ್ಧ ಪಿಜಿಐಎಂಇಆರ್ ಆಸ್ಪತ್ರೆ ಸಮೀಪದ ಪ್ರಮುಖ ಮಾರುಕಟ್ಟೆ ಪ್ರದೇಶವಾಗಿದೆ. ಪ್ರತಿದಿನ ನೂರಾರು ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಅಂಗಡಿ ಮಾಲೀಕರಿಗೆ ಯಾವುದೇ ಬೆದರಿಕೆ ಕರೆಗಳು ಬಂದಿರಲಿಲ್ಲ ಎಂದು ತಿಳಿದುಬಂದಿದೆ. ಹತ್ಯೆಯ ಹಿಂದಿನ ಉದ್ದೇಶ ಹಾಗೂ ಆರೋಪಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಖೆಡ್ಡಾಕ್ಕೆ ಬಿದ್ದ ನಕಲಿ ಅಧಿಕಾರಿ: ಸೇನೆಗೆ ಭಾಷಣ ಮಾಡಲು ಬಂದು ಸಿಕ್ಕಿಬಿದ್ದ 21ರ ಬ್ರಿಗೇಡಿಯರ್!
