ಚಂಡೀಗಢ: ಕಳೆದ ವರ್ಷ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಖ್ಯಾತಿ ಗಳಿಸಿದ್ದ ಐಐಟಿ-ವಾಲೆ ಬಾಬಾ ವಿವಾಹವಾಗಿದ್ದಾರೆ. ಬೆಂಗಳೂರಿನ ಹುಡುಗಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಐಐಟಿ ವಾಲೆ ಬಾಬಾರ ನಿಜವಾದ ಹೆಸರು ಅಭಯ್ ಸಿಂಗ್. ಹರಿಯಾಣದ ಜಜ್ಜರ್ ಜಿಲ್ಲೆಯವರು. ಬೆಂಗಳೂರಿನ ಎಂಜಿನಿಯರ್ ಪ್ರತೀಕಾ ಎಂಬವರನ್ನು ವರಿಸಿದ್ದಾರೆ.
ತನ್ನ ತಂದೆಯನ್ನು ಭೇಟಿಯಾಗಲು ಜಜ್ಜರ್‌ಗೆ ಐಐಟಿ ವಾಲೆ ಬಾಬಾ ಭೇಟಿ ಕೊಟ್ಟಿದ್ದರು. ವಕೀಲರಾಗಿರುವ ತಮ್ಮ ತಂದೆಯನ್ನು ಭೇಟಿ ಮಾಡಲು ತಹಸಿಲ್ ಸಂಕೀರ್ಣಕ್ಕೆ ತೆರಳಿದ್ದರು. ಈ ವೇಳೆ ಪತ್ನಿ ಪ್ರತೀಕಾ ಕೂಡ ಜೊತೆಗಿದ್ದರು.
ಯಾರೀ ಐಐಟಿ ವಾಲೆ ಬಾಬಾ?
ಕಳೆದ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ಸಂದರ್ಭದಲ್ಲಿ ಐಐಟಿ-ವಾಲೆ ಬಾಬಾ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದರು. ಅವರು ತಪಸ್ವಿಯಂತೆ ವೇಷ ಧರಿಸಿ ಮೇಳದಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿತ್ತು. ‘ನಾನು ಐಐಟಿಯ ಪದವೀಧರ’ ಎಂದು ಅವರು ಹೇಳಿಕೊಂಡಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದರು. ‘ಐಐಟಿ-ವಾಲೆ ಬಾಬಾ’ ಎಂಬ ವಿಶಿಷ್ಟ ಗುರುತಿನೊಂದಿಗೆ ಜನಪ್ರಿಯರಾದರು.
ಐಐಟಿ-ಬಾಂಬೆಯ ಹಿರಿಯ ವಿದ್ಯಾರ್ಥಿ ಮತ್ತು ಮಾಜಿ ಏರೋಸ್ಪೇಸ್ ಎಂಜಿನಿಯರ್ ಆಗಿದ್ದ ಅವರು, ‘ನಾನು ಹರಿಯಾಣದಿಂದ ಬಂದಿದ್ದೇನೆ. ಐಐಟಿಗೆ ಹೋಗಿದ್ದೆ, ನಂತರ ಎಂಜಿನಿಯರಿಂಗ್‌ನಿಂದ ಆರ್ಟ್ಸ್‌ಗೆ ಬದಲಾದೆ. ಅದು ಕೂಡ ಕೆಲಸ ಮಾಡಲಿಲ್ಲ. ಆದ್ದರಿಂದ ನಾನು ಬದಲಾಗುತ್ತಲೇ ಇದ್ದೆ. ನಂತರ ನಾನು ಅಂತಿಮ ಸತ್ಯವನ್ನು ತಲುಪಿದೆ’ ಎಂದು ಹೇಳಿಕೊಂಡಿದ್ದಾರೆ.
ಬಾಬಾ ಕೈಹಿಡಿದ ಬೆಂಗಳೂರಿನ ಹುಡುಗಿ ಯಾರು?
ಐಐಟಿ-ವಾಲೆ ಬಾಬಾ ಇತ್ತೀಚೆಗೆ ಕರ್ನಾಟಕದ ಬೆಂಗಳೂರಿನ ಎಂಜಿನಿಯರ್ ಆಗಿರುವ ಪ್ರತೀಕಾ ಅವರನ್ನು ವಿವಾಹವಾದರು. ಈ ಜೋಡಿ ಫೆಬ್ರವರಿ 15 ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಅಂಜೋರ್ ಮಹಾದೇವ್ ದೇವಸ್ಥಾನದಲ್ಲಿ ಮದುವೆಯಾಗಿದೆ. ಪ್ರತೀಕಾ ಅವರು ಮಾತನಾಡಿ ‘ನಾನು ಮತ್ತು ನನ್ನ ಪತಿ ಇಬ್ಬರೂ ಸನಾತನ ಧರ್ಮದ ಉದ್ದೇಶಕ್ಕಾಗಿ ಜೀವನವನ್ನು ಮುಡಿಪಾಗಿಡುವುದಾಗಿ’ ಹೇಳಿಕೊಂಡಿದ್ದಾರೆ. ಸನಾತನ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಉದ್ದೇಶವನ್ನು ದಂಪತಿ ಹೊಂದಿದ್ದಾರೆ. ಆಧ್ಯಾತ್ಮಿಕ ಗುರುಗಳು ಮತ್ತು ಆಧ್ಯಾತ್ಮಿಕ ಅನ್ವೇಷಕರನ್ನು ಒಂದೇ ಸೂರಿನಡಿ ತರುವುದು ಉದ್ದೇಶವಾಗಿದೆ ನಮ್ಮದು ಎಂದು ಹೇಳಿಕೊಂಡಿದ್ದಾರೆ.
ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲುತ್ತೆ ಎಂದಿದ್ದ ಬಾಬಾ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತವನ್ನು (Team India) ಸೋಲಿಸಲಿದೆ. ಇದೇ ನಿಜ ಎಂದು ಬಾಬಾ ಭವಿಷ್ಯ ನುಡಿದಿದ್ದರು. ಅವರ ಈ ಹೇಳಿಕೆ ವೈರಲ್ ಆಗಿತ್ತು. ಆದರೆ, ಅವರ ಭವಿಷ್ಯ ಸುಳ್ಳಾಯಿತು. ದುಬೈನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿತ್ತು.
ಗಾಂಜಾ ಕೇಸಲ್ಲಿ ಬಂಧನ
ಐಐಟಿ ಬಾಬಾರನ್ನು ಗಾಂಜಾ ಕೇಸಲ್ಲಿ ಜೈಪುರ ಪೊಲೀಸರು ಬಂಧಿಸಿದ್ದರು. ಬಾಬಾ ಬಳಿ 1.50 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ ಪತ್ತೆಯಾಗಿತ್ತು. ಅದನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಸ್ಥಳದಲ್ಲೇ ವಶಪಡಿಸಿಕೊಳ್ಳಲಾಗಿತ್ತು. ಗಾಂಜಾ ಪ್ರಮಾಣ ಕಡಿಮೆ ಇದ್ದ ಕಾರಣ ಜಾಮೀನು ನೀಡಿ ಬಿಡುಗಡೆ ಮಾಡಲಾಯಿತು.

