ಬೆಂಗಳೂರು: 2025ರ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ (Gruhalakshmi Scheme) ಬಾಕಿ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಹಂಗಾಮಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ (Suresh Kumar) ಪತ್ರ ಬರೆದಿದ್ದಾರೆ.
2025ರ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಬಾಕಿಗೆ ಸ್ಪಷ್ಟನೆ ಹಾಗೂ ಬಾಕಿ ಪಾವತಿ ಮಾಡುವಂತೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮಂಡ್ಯ ಜಿಲ್ಲೆ ಶಾಸಕರೊಂದಿಗೆ ಡಿಕೆಶಿ ಮಿಡ್‌ನೈಟ್ ಮೀಟಿಂಗ್ – ಕುತೂಹಲ ಕೆರಳಿಸಿದ 1 ಗಂಟೆ ಚರ್ಚೆ
ಪತ್ರದಲ್ಲೇನಿದೆ?
ತಮ್ಮ ಪಕ್ಷದ ಸೂಚನೆಯಂತೆ ತಾವು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ. ಇಂದಿನ ತಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ನಾಯಕರನ್ನು ಆರಿಸಲಾಗುತ್ತದೆ ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ತಮ್ಮ ಮುಂದಿನ ದಿನಗಳು ಶುಭಕರವಾಗಿರಲಿ ಎಂದು ನಾನು ಮನ:ಪೂರ್ವಕವಾಗಿ ಹಾರೈಸುತ್ತೇನೆ. ತಾವು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಜೊತೆಗೆ ಅದೇ ಸಮಯದಲ್ಲಿ ನಮ್ಮ ರಾಜ್ಯದ ಹಣಕಾಸು ಸಚಿವರೂ ಆಗಿದ್ರಿ. ಇಡೀ ದೇಶದಲ್ಲಿ ದಾಖಲೆ ಸಂಖ್ಯೆಯ ಬಜೆಟ್‌ಗಳನ್ನು ಮಂಡಿಸಿದ ಹೆಗ್ಗಳಿಕೆ ನಿಮ್ಮದು. ಒಂದು ರೀತಿಯಲ್ಲಿ ತಾವು ನಮ್ಮ ರಾಜ್ಯದ ಆರ್ಥಿಕ ತಜ್ಞರು.ಇದನ್ನೂ ಓದಿ: ವೈಭವ್ ಆರ್ಭಟಕ್ಕೆ ದಿಗ್ಗಜರ ದಾಖಲೆಗಳೇ ಧೂಳೀಪಟ
ಕಳೆದ ವರ್ಷ, 2025 ಡಿ.9ರಂದು, ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ, ವಿಧಾನಸಭೆಯಲ್ಲಿ ನಮ್ಮ ಪಕ್ಷದ ಶಾಸಕ ಶ್ರೀ ಮಹೇಶ ಟೆಂಗಿನಕಾಯಿರವರು (Mahesh Tenginkai) ಒಂದು ಬಹಳ ಮಹತ್ವದ ವಿಚಾರವನ್ನು ಸದನದ ಗಮನಕ್ಕೆ ತಂದರು. ತಮ್ಮ ಪಕ್ಷದ ಚುನಾವಣಾ ಗ್ಯಾರಂಟಿಯಾದ, ಬಹಳಷ್ಟು ಜನರ ಮತವನ್ನು ಗಳಿಸಲು ಸಾಧನವಾಗಿದ್ದ, ಗೃಹಲಕ್ಷ್ಮಿ ಯೋಜನೆಯಲ್ಲಿ ಸಂಭವಿಸಿದ್ದ ಬಹಳ ಗಂಭೀರ ಪ್ರಮಾದವನ್ನು ಅಂದು ಪ್ರಸ್ತಾಪಿಸಿದರು. 2025 ಫೆಬ್ರವರಿ ಹಾಗೂ ಮಾರ್ಚಿ ತಿಂಗಳುಗಳ ಗೃಹಲಕ್ಷ್ಮಿ ಯೋಜನೆಯ ಹಣ ರಾಜ್ಯದ ಕುಟುಂಬಗಳಿಗೆ ತಲುಪದಿರುವ ಆರೋಪ ಮಾಡಿದರು. ಇದರ ಒಟ್ಟು ಮೊತ್ತ 5000 ಕೋಟಿ ರೂ.ಯಾಗಿದ್ದು, 1.14 ಕೋಟಿ ಗೃಹಲಕ್ಷ್ಮಿಯರ ಪಾಲಿಗೆ ಇದೊಂದು ದೊಡ್ಡ ವಂಚನೆ. ತಮ್ಮ ಸಚಿವ ಸಂಪುಟದ ಮಾನ್ಯ ಸಚಿವೆ ಹಣ ಪಾವತಿಯಾಗಿದೆ ಎಂದು ಮೊದಲು ಹೇಳಿದ್ದರು. ಆದರೆ ನನ್ನ ಗೆಳೆಯ ಶಾಸಕ ಪಾವತಿ ಆಗಿಲ್ಲದಿರುವುದನ್ನು ದಾಖಲೆ ಸಮೇತ ಸಭೆಯ ಗಮನಕ್ಕೆ ತಂದು 5000 ಕೋಟಿ ರೂ. ಎಲ್ಲಿ ಹೋಯಿತು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಅದಕ್ಕೆ ಸರ್ಕಾರದ ನಿರುತ್ತರವೇ ಉತ್ತರವಾಗಿತ್ತು. ಇದು ಸಣ್ಣ ಮೊತ್ತವಲ್ಲ ಮತ್ತು ಈ ಹಣ ಫಲಾನುಭವಿಗಳಿಗೆ ತಲುಪದಿರುವುದು ಸಣ್ಣ ಪ್ರಮಾದವಲ್ಲ. ರಾಜ್ಯದ ತಿಜೋರಿಯನ್ನೇ ಲೂಟಿ ಹೊಡೆದಿರುವ ಸ್ಪಷ್ಟ ಉದಾಹರಣೆ ಇದು ಎಂದು ಅಂದು ಸದನ ಮತ್ತು ಇಡೀ ರಾಜ್ಯ ಭಾವಿಸಿತ್ತು.
ರಾಜ್ಯದ ಜನತೆಯಿಂದ ಸಂಗ್ರಹ ಮಾಡಿರುವ ತೆರಿಗೆಯ ಪಾವಿತ್ರ‍್ಯತೆ ಕುರಿತು ನಾನು ನಿಮಗೆ ಏನೂ ಹೇಳಬೇಕಿಲ್ಲ. ಪ್ರತಿಯೊಂದು ಪೈಸೆಗೂ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಇದು ಜನತೆ ಅಪೇಕ್ಷಿಸುವ ಉತ್ತರದಾಯಿತ್ವ. ಕಳೆದ ಡಿಸೆಂಬರ್ 9ರ ಶಾಸಕರ ಈ ಪ್ರಸ್ತಾವನೆಗೆ ಇದೀಗ ಐದು ತಿಂಗಳು ಪೂರ್ಣಗೊಂಡಿವೆ. ಆದರೆ ಆ ಪ್ರಶ್ನೆಗೆ ಉತ್ತರ ದೊರಕಿಲ್ಲ. ರಾಜ್ಯದ ಗೃಹಲಕ್ಷ್ಮಿಯರಿಗೆ ಈ ಹಣ ತಲುಪಿಲ್ಲ. ಈ ಬಾರಿ ಮೊತ್ತದ ಹಣ ಎಲ್ಲಿ? ಯಾರಿಗೆ ಹೋಗಿದೆ? ಎಂಬುದು ಇದುವರೆಗೂ ರಾಜ್ಯದ ನಾಗರಿಕರಿಗೆ ತಿಳಿದುಬಂದಿಲ್ಲ. ತಮ್ಮಲ್ಲಿ ನನಗೆ ಗೌರವವಿರುವುದರಿಂದ, ನಾನು ಈ ಮನವಿ ಮಾಡಿಕೊಳ್ಳುತ್ತಿದ್ದೇನೆ. ರಾಜ್ಯದ ಗೃಹಲಕ್ಷ್ಮಿಯರಿಗೆ ತಲುಪಬೇಕಾಗಿದ್ದ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಹಣದ ಸ್ಥಿತಿಗತಿ ಏನು ಎಂಬುದನ್ನು ರಾಜ್ಯಕ್ಕೆ ತಿಳಿಸಬೇಕಿರುವುದು ರಾಜ್ಯದ ತಿಜೋರಿಯ ಸಂಪೂರ್ಣ ನಿಯಂತ್ರಣ ಹೊಂದಿದ್ದ ನಿಮ್ಮ ಜವಾಬ್ದಾರಿ. ಇದು ಯಾವುದೇ ಸರ್ಕಾರದ ನೈತಿಕತೆ ಪ್ರಶ್ನೆ. ಆ ಜವಾಬ್ದಾರಿಯನ್ನು ತಾವು ಪ್ರಾಮಾಣಿಕವಾಗಿ ನಿರ್ವಹಿಸಿ ರಾಜ್ಯಕ್ಕೆ ಈ ಭಾರಿ ಮೊತ್ತದ ಹಣದ ಹಣೆಬರಹದ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಭೀಮಾತೀರದಲ್ಲಿ ಹತ್ಯಾಕಾಂಡ – ಸ್ಥಳಕ್ಕೆ ಐಜಿಪಿ ಭೇಟಿ
