ಬಳ್ಳಾರಿ: ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ನಡೆಸಿದ ʼವಿಶೇಷ ಯಾಗʼದ ವಿಚಾರ ಮುನ್ನೆಲೆಗೆ ಬಂದಿದೆ. ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿರುವ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ (Ballari) ಅವರಿಗಾಗಿ ನಡೆದ ವಿಶೇಷ ಯಾಗವೊಂದು ಈಗ ದೊಡ್ಡ ಸುದ್ದಿ ಮಾಡುತ್ತಿದೆ.
ಡಿಕೆಶಿ ಅವರ ಪರಮಾಪ್ತ ಹಾಗೂ ಸ್ಥಳೀಯ ಮುಖಂಡ ಜೆ.ಎಸ್. ಆಂಜನೇಯಲು ನೇತೃತ್ವದಲ್ಲಿ ಈ ಹಿಂದೆ ‘ರಾಜಶ್ಯಾಮಲಾ ಯಾಗ’ವನ್ನು(Rajashyamala Yaga) ಮಾಡಲಾಗಿತ್ತು. ಬಳ್ಳಾರಿ ತಾಲೂಕಿನ ಅಮೃತೇಶ್ವರ ದೇವಾಲಯದಲ್ಲಿ ರಾಜಶ್ಯಾಮಲ ಯಾಗವನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ತಮ್ಮ ಧರ್ಮಪತ್ನಿಯೊಂದಿಗೆ ಶಾಸ್ತ್ರೋಕ್ತವಾಗಿ ಸಂಕಲ್ಪ ಮಾಡಿ ಈ ಯಾಗವನ್ನು ಆಂಜನೇಯಲು ನೆರವೇರಿಸಿದ್ದರು.
ಈ ಯಾಗ ಮಾತ್ರವಲ್ಲದೆ ಚಂಡಿಕಾ ಯಾಗ (ಶಕ್ತಿ ವೃದ್ಧಿ ಮತ್ತು ವಿಘ್ನ ನಿವಾರಣೆಗೆ), ರುದ್ರಯಾಗ (ಆರೋಗ್ಯ ಮತ್ತು ನಕಾರಾತ್ಮಕ ಶಕ್ತಿಗಳ ನಾಶಕ್ಕೆ), ಸುದರ್ಶನ ಯಾಗ (ಶತ್ರುಗಳ ಸಂಚು ವಿಫಲಗೊಳಿಸಲು) ಮತ್ತು ಮಹಾ ಗಣಪತಿ ಹೋಮ ಮಾಡಿಸಿದ್ದರು. ಮೂರು ದಿನಗಳ ಕಾಲ ನಡೆದ ಯಾಗವನ್ನು ಅತ್ಯಂತ ಕಟ್ಟುನಿಟ್ಟಾಗಿ ಮತ್ತು ಶಾಸ್ತ್ರೋಕ್ತವಾಗಿ ನಡೆಸಲು ಹೈದರಾಬಾದ್, ಕೇರಳ ಹಾಗೂ ತಮಿಳುನಾಡಿನ ಸುಮಾರು 50 ಪ್ರಖ್ಯಾತ ಋತ್ವಿಜರು ಮತ್ತು ವೇದ ಪಂಡಿತರು ಭಾಗವಹಿಸಿದ್ದರು.
ರಾಜಕೀಯದಲ್ಲಿ ಅತ್ಯುನ್ನತ ಅಧಿಕಾರ ಪ್ರಾಪ್ತಿ, ಶತ್ರು ಸಂಹಾರ, ಉನ್ನತ ಹುದ್ದೆ ಸಿದ್ಧಿ ಹಾಗೂ ಸಾಮ್ರಾಜ್ಯ ವಿಸ್ತರಣೆಗಾಗಿ ಹಿಂದೆ ರಾಜ-ಮಹಾರಾಜರು ಈ ರಾಜಶ್ಯಾಮಲಾ ಯಾಗವನ್ನು ಮಾಡಿಸುತ್ತಿದ್ದರು ಎಂಬ ಕಥೆಯಿದೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹಾಡಿಹೊಗಳಿದ ಡಿಕೆಶಿ

ಇತ್ತೀಚಿನ ಆಧುನಿಕ ರಾಜಕಾರಣದಲ್ಲೂ ಈ ಯಾಗಕ್ಕೆ ಅಪಾರ ಮನ್ನಣೆಯಿದೆ. ಹಿಂದೆ ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ (KCR), ಪ್ರಸ್ತುತ ಸಿಎಂ ರೇವಂತ್ ರೆಡ್ಡಿ ಹಾಗೂ ಆಂಧ್ರಪ್ರದೇಶದ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರು ಕೂಡ ಅಧಿಕಾರ ಹಿಡಿಯುವ ಮುನ್ನ ಇದೇ ಯಾಗವನ್ನು ಮಾಡಿಸಿ ಯಶಸ್ವಿಯಾಗಿದ್ದರು.
ಏನಿದು ರಾಜಶ್ಯಾಮಲ ಯಾಗ?
ರಾಜಶ್ಯಾಮಲ ಯಾಗವು (ರಾಜಮಾತಂಗಿ ಎಂದೂ ಕರೆಯಲ್ಪಡುವ) ದೇವಿಯ ಅತ್ಯಂತ ಶಕ್ತಿಶಾಲಿ ಮತ್ತು ದೈವಿಕ ಆರಾಧನೆಯಾಗಿದೆ. ಜ್ಞಾನ, ಸಂಗೀತ, ಕಲೆ, ಮತ್ತು ವಾಕ್ಚಾತುರ್ಯಕ್ಕೆ ಅಧಿದೇವತೆಯಾದ ರಾಜಶಾಮಲೆಯನ್ನು ಪ್ರಾರ್ಥಿಸಿ ಈ ಯಾಗವನ್ನು ಮಾಡಲಾಗುತ್ತದೆ. ರಾಜಕೀಯದಲ್ಲಿ ಜಯ, ಶತ್ರುನಾಶ, ಮತ್ತು ಉನ್ನತ ಅಧಿಕಾರ ಪ್ರಾಪ್ತಿಗಾಗಿ ಇದು ಅತ್ಯಂತ ಪ್ರಸಿದ್ಧವಾಗಿದೆ.
ಏನು ಸಿದ್ಧಿಸುತ್ತದೆ?
ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಸಾರ್ವಜನಿಕ ಜೀವನದಲ್ಲಿರುವವರಿಗೆ ಅಪಾರವಾದ ಪ್ರಭಾವ, ಅಧಿಕಾರ ಮತ್ತು ಯಶಸ್ಸನ್ನು ತಂದುಕೊಡುತ್ತದೆ. ವಿದ್ಯಾರ್ಥಿಗಳಿಗೆ, ಸಂಗೀತಗಾರರಿಗೆ ಮತ್ತು ಸಾಹಿತಿಗಳಿಗೆ ಉತ್ತಮ ಬುದ್ಧಿಶಕ್ತಿ, ಜ್ಞಾನ ಹಾಗೂ ಕಲೆಯಲ್ಲಿ ಪ್ರಾವೀಣ್ಯತೆಯನ್ನು ನೀಡುತ್ತದೆ. ಇದನ್ನೂ ಓದಿ: Exclusive ಸಿದ್ದು ಸಂಪುಟದ 17-20 ಸಚಿವರಿಗೆ ಕೊಕ್? ಯಾರಿಗೆ ಸಿಗಲಿದೆ ಹೈಕಮಾಂಡ್ ‘ಸೇಫ್’ ಕಾರ್ಡ್?

ಮಾತಿನ ಮೇಲೆ ಹಿಡಿತ ಮತ್ತು ಪ್ರಭಾವಿ ವ್ಯಕ್ತಿತ್ವವನ್ನು (ಆಕರ್ಷಣಾ ಶಕ್ತಿ) ಹೆಚ್ಚಿಸುತ್ತದೆ. ಸರ್ಕಾರಿ ಉದ್ಯೋಗ ದೊರೆಯಲು, ಉದ್ಯೋಗದಲ್ಲಿ ಬಡ್ತಿ ಪಡೆಯಲು ಹಾಗೂ ಕೋರ್ಟ್/ಕಾನೂನು ವಿವಾದಗಳಲ್ಲಿ ಜಯವನ್ನು ನೀಡುತ್ತದೆ. ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿ, ಶತ್ರುಭಯವನ್ನು ದೂರಗೊಳಿಸಿ, ಕುಟುಂಬಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸುತ್ತದೆ ಎಂಬ ನಂಬಿಕೆಯಿದೆ.
ಯಾವಾಗ ಮಾಡಿಸಿದರೆ ಉತ್ತಮ?
ಸಾಮಾನ್ಯವಾಗಿ ಈ ಯಾಗವನ್ನು ನವರಾತ್ರಿ, ವಸಂತ ಪಂಚಮಿ ಅಥವಾ ಶುಭ ಮುಹೂರ್ತಗಳಲ್ಲಿ ಮಾಡಲಾಗುತ್ತದೆ. ಈ ಪೂಜಾ ವಿಧಾನದಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆಗಳನ್ನು ನೆರವೇರಿಸಿ, ನಿರ್ದಿಷ್ಟವಾದ ರಾಜಶ್ಯಾಮಲ ದೇವಿಯ ಮಂತ್ರಗಳನ್ನು ಪಠಿಸುತ್ತಾ ಹೋಮವನ್ನು ಮಾಡಲಾಗುತ್ತದೆ.
