ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಇಂದು (ಮೇ 29) ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂವಿಧಾನಬದ್ಧವಾಗಿ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ಈ ಬಗ್ಗೆ ಲೋಕಭವನದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ ಅನ್ನೋ ಮಾಹಿತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಆದಾಗ್ಯೂ ಹೊಸ ಸರ್ಕಾರ ರಚನೆಯಾಗುವವರೆಗೆ ಇನ್ನೂ 2-3 ದಿನಗಳ ಕಾಲ ಸಿದ್ದರಾಮಯ್ಯ ಅವರು ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ. ಇದನ್ನೂ ಓದಿ: ಗೋಧೂಳಿ ಮುಹೂರ್ತ ಏಕೆ ಅತ್ಯಂತ ಮಂಗಳಕರ?

ರಾಜ್ಯಪಾಲರು ರಾಜಧಾನಿಯಲ್ಲಿ ಇಲ್ಲದ ಕಾರಣ, ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದರು. ರಾಜೀನಾಮೆ ಪತ್ರವನ್ನ ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಬೇಕಿತ್ತು. ಗುರುವಾರ (ಮೇ 28) ರಾತ್ರಿ ಇಂದೋರ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯಪಾಲರು ಇಂದು ಬೆಳಗ್ಗೆಯೇ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೀಗಾಗಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಜರೂರಾಗಿ ಸಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ – ಕೇವಲ ಪದ ತ್ಯಾಗವಲ್ಲ, ಒಂದು ಯುಗದ ಅಂತ್ಯ!

ಡಿಕೆಶಿ ಪಟ್ಟಾಭಿಷೇಕಕ್ಕೆ ಟೈಂ ಫಿಕ್ಸ್
ರಾಜ್ಯಪಾಲರು ರಾಜೀನಾಮೆ ಅಂಗೀಕಾರ ಮಾಡಿರುವುದರಿಂದ ಶನಿವಾರ (ಮೇ 30) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಗಳಿವೆ. ಸಿಎಲ್‌ಪಿ ನಾಯಕರಾಗಿ ಡಿಕೆಶಿ ಆಯ್ಕೆಯಾಗುವುದು ಖಚಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರ ಸಂಜೆ ಗೋದೂಳಿ ಮುಹೂರ್ತದಲ್ಲಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ʻಪಬ್ಲಿಕ್ ಟಿವಿʼಗೆ ತಿಳಿಸಿವೆ.
ಸೋಮವಾರ ಸಂಜೆ ಲೋಕಭವನದಲ್ಲಿ ಅದ್ಧೂರಿ ಪದಗ್ರಹಣಕ್ಕೆ ಭರದ ಸಿದ್ಧತೆ ನಡೆದಿದೆ. ಇದನ್ನೂ ಓದಿ: ತೆರಿಗೆ ವಂಚನೆ ಪ್ರಕರಣ – 2 ವರ್ಷ ವಿದೇಶಿ ಪ್ರವಾಸಕ್ಕೆ ತೆರಳಲು ಡಿಕೆಶಿಗೆ ಕೋರ್ಟ್ ಅನುಮತಿ
