– ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ಸಮಿತಿ ರಚನೆ
ಉಡುಪಿ: ಪರಿಭಾವಿತ (ಡೀಮ್ಡ್) ಅರಣ್ಯ (Deemed Forest) ಪ್ರದೇಶದಲ್ಲಿ ಸರ್ಕಾರಿ ಕಟ್ಟಡ, ಆಸ್ಪತ್ರೆ, ಅಂಗನವಾಡಿ ಇತ್ಯಾದಿ ಇದ್ದು, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆಗಿರುವ ತಪ್ಪು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದ್ದಾರೆ.
ಕಾರ್ಕಳದಲ್ಲಿಂದು (Karkala) ವಲಯ ಅರಣ್ಯಾಧಿಕಾರಿಗಳ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ನೂತನ ಕಟ್ಟಡ ಉದ್ಘಾಟಿಸಿ, ಅರಣ್ಯ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಡೀಮ್ಡ್ ಅರಣ್ಯ ಸಮಸ್ಯೆ ಪರಿಹರಿಸಲು ಕೊನೆಯ ಅವಕಾಶ ದೊರೆತಿದ್ದು, ಸರ್ವೋನ್ನತ ನ್ಯಾಯಾಲಯಕ್ಕೆ ಮರು ಮನವಿ ಸಲ್ಲಿಸುವ ಸಲುವಾಗಿ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದರು. ಇದನ್ನೂ ಓದಿ: ಹೈಕಮಾಂಡ್ ತುರ್ತು ಬುಲಾವ್ಗೆ ಸಿಎಂ ತಂತ್ರಗಾರಿಕೆ – ಆಪ್ತ ಸಚಿವರ ದಂಡಿನೊಂದಿಗೆ ದೆಹಲಿಗೆ ಪ್ರಯಾಣ
ಮೊದಲಿಗೆ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದಾಗ 9 ಲಕ್ಷ ಹೆಕ್ಟೇರ್ ಜಮೀನನ್ನು ಡೀಮ್ಡ್ ಎಂದು ಗುರುತಿಸಲಾಗಿತ್ತು. ನಂತರ 2022ರಲ್ಲಿ ಪ್ರಮಾಣಪತ್ರ ಸಲ್ಲಿಸಿದಾಗ 3 ಲಕ್ಷ 33 ಸಾವಿರ ಹೆಕ್ಟೇರ್ ಜಮೀನು ಎಂದು ಪರಿಷ್ಕರಿಸಲಾಯಿತು. ಆಗ ಸಮರ್ಪಕವಾಗಿ ಸರ್ವೆ ನಡೆಸದೆ, ಖುದ್ದು ಪರಿಶೀಲಿಸದ ಕಾರಣ ಸರ್ಕಾರಿ ಕಟ್ಟಡ, ಶಾಲೆ, ಆಸ್ಪತ್ರೆ, ಪಟ್ಟಾ ಭೂಮಿ ಸೇರಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದು, ಈ ಲೋಪ ಸರಿಪಡಿಸಬೇಕಾಗಿದೆ. ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ ದಂಡ ಮತ್ತು ಇತರ ಶುಲ್ಕವನ್ನು ಪಾವತಿಸಬೇಕಾಗಿದೆ. ಪ್ರಸ್ತುತ ಹೈಕೋರ್ಟ್ ಈ ಸಂಬಂಧ ನಿರ್ದೇಶನ ನೀಡಿದ್ದು, ನ್ಯಾಯಾಲಯದ ಆದೇಶದಂತೆ ಸರ್ಕಾರ ನಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: Budgam | ಕುರಾನ್ ಅಭ್ಯಾಸಕ್ಕೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ
ಇದೇ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು. ಇದಕ್ಕೂ ಮುನ್ನ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ತೆರಳಿದ ಈಶ್ವರ ಖಂಡ್ರೆ ದೇವರ ದರ್ಶನ ಪಡೆದು, ರಾಜ್ಯದಲ್ಲಿ ಉತ್ತಮ, ಮಳೆ, ಬೆಳೆ, ಆಗಲಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್, ಕಮಲಾ ಕರಿಕಳನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಒಂದು ಚಿರತೆ ಸೆರೆ ಬೆನ್ನಲ್ಲೇ ಮತ್ತೊಂದು ಚಿರತೆ ಆತಂಕ – ಗ್ರಾಮಸ್ಥರಲ್ಲಿ ಢವಢವ
ಮುಂಚೂಣಿ ಸಿಬ್ಬಂದಿಗೆ ಸುರಕ್ಷತಾ ಸಲಕರಣೆ ನೀಡಿ:
ಅರಣ್ಯ ರಕ್ಷಣೆಯಲ್ಲಿ ಮುಂಚೂಣಿ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದ್ದು, ಅವರ ಸುರಕ್ಷತೆಗಾಗಿ ವಿದ್ಯುತ್ ಪ್ರವಹಿಸುವ ಕೈಗೋಲು (ಸ್ಟಿಕ್), ಮಳೆಯಿಂದ ರಕ್ಷಿಸುವ ಜಾಕೆಟ್, ಶೂ ಇತ್ಯಾದಿ ನೀಡುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ಇದನ್ನೂ ಓದಿ: ನಿಷೇಧಿಸಲಾಗಿದ್ದ ಜಮಾತ್-ಎ-ಇಸ್ಲಾಮಿ ಸಂಘಟನೆ ಪುನಶ್ಚೇತನಕ್ಕೆ ಯತ್ನ – ಕಾಶ್ಮೀರದ ಹಲವೆಡೆ NIA ದಾಳಿ
ತರುವಾಯ ಅರಣ್ಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಒದಗಿಸಲಾಗಿರುವ ಆಧುನಿಕ ಮತ್ತು ಹಗುರ ಬಂದೂಕುಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುಂಚೂಣಿ ಸಿಬ್ಬಂದಿಯ ಸುರಕ್ಷತೆಗೂ ಗಮನ ಹರಿಸುವಂತೆ ತಿಳಿಸಿದರು. ಆನೆ ಕಾರ್ಯಪಡೆ, ಕಳ್ಳಬೇಟೆ ನಿಗ್ರಹ ಪಡೆ, ಮುಂಜೂಣಿ ಸಿಬ್ಬಂದಿಗಳಿಗೆ ವಸತಿಗೃಹಗಳನ್ನು ನೀಡಲಾಗಿದೆಯೇ ಎಂದೂ ಪ್ರಶ್ನಿಸಿದ ಸಚಿವರು, ಕಷ್ಟಪಟ್ಟು ಅಪಾಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅಪಾಯಭತ್ಯೆ ನೀಡಲಾಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ತಿಳಿಸಿದರು. ನಂತರ ಪ್ರವಾಸಿ ಮಂದಿರಕ್ಕೆ ತೆರಳಿದ ಸಚಿವರು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಭಾರೀ ವ್ಯತ್ಯಯ – ಪಬ್ಲಿಕ್ ಟಿವಿ ಪ್ರಶ್ನೆಗೆ ಮುನಿಯಪ್ಪ ತರಲೆ ಉತ್ತರ!
