ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಪಡಿತರ ವಿತರಣೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪಬ್ಲಿಕ್ ಟಿವಿ (PUBLiC TV) ಕೇಳಿದ ಗಂಭೀರ ಪ್ರಶ್ನೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (K. H. Muniyappa) ಅವರು ಬೇಜವಾಬ್ದಾರಿಯ ಹಾಗೂ ತರಲೆ ಉತ್ತರ ನೀಡುವ ಮೂಲಕ ಜಾರಿಕೊಂಡಿದ್ದಾರೆ.
ರಾಜ್ಯದಲ್ಲಿ ಅಕ್ಕಿ ವಿತರಣೆ ಯಾಕೆ ಸರಿಯಾಗಿ ಆಗುತ್ತಿಲ್ಲ, ಕೊರತೆಗೆ ಕಾರಣವೇನು ಎಂದು ಪಬ್ಲಿಕ್ ಟಿವಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಾಗ ಸಚಿವ ಮುನಿಯಪ್ಪ ಅವರು ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ.
“ಪಡಿತರ ಅಕ್ಕಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲಾದರೂ ಅಕ್ಕಿ ಕಡಿಮೆ ಕೊಡ್ತಾ ಇದ್ದಾರೆ ಅಂತಾ ಹೇಳಿ, ನಾನು ಕೂಡಲೇ ಕ್ರಮ ತಗೋಳ್ತೇನೆ. ನನ್ನ ಹತ್ತಿರ ತರಲೆ ಮಾಡೋಕೆ ಬರಬೇಡಿ,” ಎಂದು ಸಚಿವರು ಕಿಡಿಕಾರಿದ್ದಾರೆ. ಆದರೆ ಅಕ್ಕಿ ಪೂರೈಕೆ ಯಾಕೆ ಎಂಬ ಅಸಲಿ ಪ್ರಶ್ನೆಗೆ ಸಚಿವರಿಂದ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಪ್ರಸ್ತುತ ರಾಜ್ಯ ಸರ್ಕಾರದಿಂದ ಬರಬೇಕಾದ ಅಕ್ಕಿ ಪೂರೈಕೆಯಾಗುತ್ತಿಲ್ಲ. ಈಗ ಕೇಂದ್ರ ಸರ್ಕಾರದಿಂದ ಬರುತ್ತಿರುವ ಅಕ್ಕಿ ಮತ್ತು ರಾಗಿಯನ್ನು ಮಾತ್ರ ಸದ್ಯಕ್ಕೆ ವಿತರಣೆ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರದಿಂದ ಈ ತಿಂಗಳು ಅಕ್ಕಿ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕಿಡಿ ಹೊತ್ತಿಸಿದ ಮೂರಿನಕಟ್ಟೆ ವಿವಾದ: ಇಂದಿನಿಂದ ಮೂರು ದಿನ ನಿಷೇಧಾಜ್ಞೆ ಜಾರಿ
ಮುಂದಿನ ಎರಡು ತಿಂಗಳು ಇದೇ ರೀತಿ ರಾಗಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಅಕ್ಕಿಯ ತೀವ್ರ ಕೊರತೆ ಎದುರಾಗಿದೆಯೇ ಎಂಬ ಪ್ರಶ್ನೆ ಮೂಡಿದ್ದರೂ, ಆಹಾರ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡದೆ ಮೌನಕ್ಕೆ ಶರಣಾಗಿದೆ.
ಸರ್ವರ್ ಸಮಸ್ಯೆ:
ಅಕ್ಕಿ ಕೊರತೆಯ ನಡುವೆ ಪಡಿತರ ಅಂಗಡಿಗಳಲ್ಲಿ ತಾಂತ್ರಿಕ ದೋಷಗಳು ಗ್ರಾಹಕರನ್ನು ಮತ್ತಷ್ಟು ಕಂಗಾಲು ಮಾಡಿವೆ. ಬೆಂಗಳೂರಿನ ಲಗ್ಗೆರೆಯ ಲಕ್ಷ್ಮೀದೇವಿ ನಗರದ ಪಡಿತರ ಅಂಗಡಿಯಲ್ಲಿ ಸಾರ್ವಜನಿಕರು ರೇಷನ್‌ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ತೀವ್ರ ಸರ್ವರ್ ಸಮಸ್ಯೆಯಿಂದಾಗಿ ಬಯೋಮೆಟ್ರಿಕ್ ಪ್ರಕ್ರಿಯೆ ತಡವಾಗುತ್ತಿದ್ದು, ಜನಸಾಮಾನ್ಯರು ಕ್ಯೂ ನಿಂತು ಸುಸ್ತಾಗುತ್ತಿದ್ದಾರೆ. ಸುಡುವ ಬಿಸಿಲಿನಲ್ಲಿಯೇ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇರುವುದರಿಂದ ಸಾರ್ವಜನಿಕರು ಸರ್ಕಾರದ ಮತ್ತು ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
