ನವದೆಹಲಿ: ಭಾರತದ ರಕ್ಷಣಾ ಪಡೆಗಳ ನೂತನ ಮುಖ್ಯಸ್ಥರನ್ನಾಗಿ (CDS) ಲೆಫ್ಟಿನೆಂಟ್ ಜನರಲ್ ಎನ್.ಎಸ್ ರಾಜಾ ಸುಬ್ರಮಣಿ (NS Raja Subramani) (ನಿವೃತ್ತ) ಅವರನ್ನ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇದರೊಂದಿಗೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನ ಮಕ ಮಾಡಿದೆ.
ಮೇ 30 ರಂದು ಸಿಡಿಎಸ್ ಆಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ಜನರಲ್ ಅನಿಲ್ ಚೌಹಾಣ್ ಅವರ ಸ್ಥಾನವನ್ನು ರಾಜಾ ಸುಬ್ರಮಣಿ ವಹಿಸಿಕೊಳ್ಳಲಿದ್ದಾರೆ.
ಫ್ಟಿನೆಂಟ್ ಜನರಲ್ ಸುಬ್ರಮಣಿ ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ (NSCS) ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಜುಲೈ 31 ರಂದು ಅವರು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ (VSOAS) ಸೇನೆಯಿಂದ ನಿವೃತ್ತರಾಗಿದ್ದರು.

ಎನ್.ಎಸ್. ರಾಜಾ ಸುಬ್ರಮಣಿ ಯಾರು?
ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 1 ರಂದು ಅವರು ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು, ಜುಲೈ 2024 ರಿಂದ ಜುಲೈ 2025 ರವರೆಗೆ ಭೂಸೇನೆಯ ಉಪಮುಖ್ಯಸ್ಥರಾಗಿ (Vice Chief of Army Staff) ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೆ, ಮಾರ್ಚ್ 2023 ರಿಂದ ಜೂನ್ 2024 ರವರೆಗೆ ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿಯಾಗಿದ್ದಾರೆ. ರಾಜಾ ಸುಬ್ರಮಣಿ ಅವರನ್ನು ಮೊದಲಿಗೆ 1985 ರ ಡಿ. 14 ರಂದು ಗರ್ವಾಲ್ ರೈಫಲ್ಸ್‌ನ 8ನೇ ಬೆಟಾಲಿಯನ್‌ಗೆ ನಿಯೋಜಿಸಲಾಗಿತ್ತು. ಒಟ್ಟು ಭಾರತೀಯ ಸೇನೆಯಲ್ಲಿ 39 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ರಾಜಾ ಸುಬ್ರಮಣಿ ಪಡೆದ ಗೌರವ, ಪದಕಗಳು
ಭಾರತೀಯ ಸೇನೆಯಲ್ಲಿನ ಅವರ 39 ವರ್ಷಗಳ ಸುದೀರ್ಘ ಮತ್ತು ನಿಷ್ಠಾವಂತ ಸೇವೆ ಪರಿಗಣಿಸಿ ಅವರಿಗೆ ಹಲವು ಪ್ರತಿಷ್ಠಿತ ಸೇನಾ ಗೌರವಗಳನ್ನು ನೀಡಲಾಗಿದೆ. ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ಶೌರ್ಯ ಮತ್ತು ಸೇವಾ ಪದಕಗಳು ಅವರ ಮುಡಿಗೇರಿವೆ. ಮೇ 30 ರಂದು ಜನರಲ್ ಅನಿಲ್ ಚೌಹಾಣ್ ನಿವೃತ್ತರಾದ ಬಳಿಕ ಸುಬ್ರಮಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ʻಆಪರೇಷನ್ ರೈನೋʼ ಭಾಗವಾಗಿ ಅಸ್ಸಾಂನಲ್ಲಿ ದಂಗೆ ನಿಗ್ರಹಿಸುವಲ್ಲಿ 16 ಗರ್ವಾಲ್ ರೈಫಲ್ಸ್ ಮತ್ತು ಜಮ್ಮು – ಕಾಶ್ಮೀರದಲ್ಲಿ 168 ಪದಾತಿ ದಳ ಹಾಗೂ ಕೇಂದ್ರ ವಲಯದಲ್ಲಿ 17 ಪರ್ವತ ವಿಭಾಗವನ್ನ ಸವಾಲಿನ ಕಾರ್ಯಾಚರಣೆ ವೇಳೆಯೂ ಮುನ್ನಡೆಸಿದ್ದರು.
ನೌಕಾಪಡೆಗೂ ನೂತನ ಮುಖ್ಯಸ್ಥರ ನೇಮಕ
ಮತ್ತೊಂದು ಪ್ರಮುಖ ಮಿಲಿಟರಿ ನೇಮಕಾತಿಯಲ್ಲಿ, ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ (Admiral Krishna Swaminathan) ಅವರನ್ನು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಕ ಮಾಡಲಾಗಿದೆ. ಅವರು ಪ್ರಸ್ತುತ ಪಶ್ಚಿಮ ನೌಕಾ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇ 31 ರಂದು ನೌಕಾ ಸಿಬ್ಬಂದಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಡ್ಮಿರಲ್ ಸ್ವಾಮಿನಾಥನ್ 1987 ರ ಜು.1 ರಿಂದ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

