– ಅಬಕಾರಿ ಸಚಿವರ ರಾಜೀನಾಮೆ ಪಡೆದು ಭ್ರಷ್ಟಾಚಾರದ ತನಿಖೆ ನಡೆಸಲು ಒತ್ತಾಯ
ಬೆಂಗಳೂರು: ಭ್ರಷ್ಟಾಚಾರದಲ್ಲಿ (Corruption) ಮುಳುಗಿ ಹೋಗಿರುವ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳು ಅಬಕಾರಿ ವಿಚಾರದಲ್ಲಿ ಗಟ್ಟಿ ನಿರ್ಧಾರವನ್ನ ತೆಗೆದುಕೊಳ್ಳಬೇಕೆಂಬುದು ಬಿಜೆಪಿ ಮತ್ತು ಜೆಡಿಎಸ್ ನಿಲುವು. ಅಬಕಾರಿ ಸಚಿವರ ರಾಜೀನಾಮೆ ಪಡೆದು ಆಮೇಲೆ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ಒತ್ತಾಯಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರವು ಇವತ್ತು ಅಬಕಾರಿ ಇಲಾಖೆಗೂ ಬಂದು ತಲುಪಿದೆ. ರಾಜ್ಯ ಸರಕಾರವು (Karnataka Government) ಒಂದು ಕಡೆ ತನ್ನ ಗ್ಯಾರಂಟಿಗಳಿಗೆ ಹಣ ಕ್ರೋಢೀಕರಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆಯಲ್ಲಿ ಟಾರ್ಗೆಟ್ ಹೆಚ್ಚಿಸಿ ಕರ್ನಾಟಕವನ್ನ ಕುಡುಕರ ರಾಜ್ಯವಾಗಿ ಮಾಡುತ್ತಿದೆ. ಮನಸೋಇಚ್ಛೆ ಲಿಕ್ಕರ್ ಲೈಸನ್ಸ್‍ಗಳನ್ನು ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಸಿಎಂ ಕುರ್ಚಿ ಉಳಿಯಬೇಕಿದೆ, ಅದಕ್ಕೆ AICC ಗೆ ಸಾವಿರ ಸಾವಿರ ಕೋಟಿ ಹೋಗ್ತಿದೆ; ಆರ್. ಅಶೋಕ್
ರಾಜ್ಯ ಸರಕಾರದ ನೀತಿಯ ಪರಿಣಾಮವಾಗಿ 500 ಮೀಟರ್‌ಗೆ ಒಂದರಂತೆ ಲಿಕ್ಕರ್ ಅಂಗಡಿ (liquor Shop) ಸಿಗುವಂತಾಗಿದೆ. ಯಾವುದೇ ಇಲಾಖೆಯನ್ನು ತೆಗೆದುಕೊಂಡರೂ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ. ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಹಗರಣ ಎಂದು ಅದರ ಅಧ್ಯಕ್ಷರೂ ಬಹಿರಂಗವಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.
ಆಡಿಯೋ ಟೇಪ್ ಬಹಿರಂಗವಾಗಿದ್ದು ಅದರಲ್ಲಿ ಅಬಕಾರಿ ಸಚಿವ ತಿಮ್ಮಾಪುರ, ಅವರ ಮಗ, ಮುಖ್ಯಮಂತ್ರಿಗಳ ಬಗ್ಗೆ ಉಲ್ಲೇಖವಾಗಿದೆ ಎಂದು ಆರೋಪಿಸಿದರು. ಅಬಕಾರಿ ಸಚಿವರು ಹಿಂದೆ ಯಾರ‍್ಯಾರು ರಾಜೀನಾಮೆ ನೀಡಿದ್ದಾರೆಂದು ಉದ್ದುದ್ದ ಭಾಷಣ ಮಾಡಿದ್ದಾರೆ. ಮಡಿಕೇರಿಯ ಗಣಪತಿಯವರ ಆತ್ಮಹತ್ಯೆ ಪ್ರಕರಣದಲ್ಲೂ ಜಾರ್ಜ್ ಅವರು ರಾಜೀನಾಮೆ ಕೊಡಬೇಕಿತ್ತು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಈ ಸರಕಾರ ಆಡಳಿತಕ್ಕೆ ಬಂದ ಬಳಿಕ ಇತ್ತೀಚೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆದಿತ್ತು. ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅನಿವಾರ್ಯವಾಗಿ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಗಮನ ಸೆಳೆದರು. ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಹಗರಣ ಆರೋಪ – ಆರ್.ಬಿ ತಿಮ್ಮಾಪೂರ ರಾಜೀನಾಮೆಗೆ ಬಿಗಿಪಟ್ಟು
ನಿನ್ನೆ ಮುಖ್ಯಮಂತ್ರಿ ಹಾದಿಯಾಗಿ ಸಚಿವರ ಭಂಡತನವನ್ನ ಸದನದಲ್ಲಿ ನೋಡಿದ್ದು, ಎಲ್ಲೋ ಒಂದು ಕಡೆ ಈ ಭ್ರಷ್ಟಾಚಾರವು ಸಚಿವರಿಗೇ ಸೀಮಿತವಾಗಿಲ್ಲ ಎಂಬುದು ಸ್ಪಷ್ಟ ಎಂದರು. ಇದನ್ನೂ ಓದಿ: ಗೋವಿಂದ ಗೋವಿಂದ ಕೋಟಿ ಕೋಟಿ ಗೋವಿಂದ – ಸದನದಲ್ಲಿ ದೋಸ್ತಿ ನಾಯಕರಿಂದ ಅಹೋರಾತ್ರಿ ಪ್ರತಿಭಟನೆ
ಕರ್ನಾಟಕವು ಕಾಂಗ್ರೆಸ್ ಹೈಕಮಾಂಡಿಗೆ ಎಟಿಎಂ ಆಗಿ ಪರಿವರ್ತನೆಯಾಗಿದೆ. ರಾಜೀನಾಮೆ ಕೊಡದಂತೆ ಅಬಕಾರಿ ಸಚಿವರ ಮೇಲೂ ಒತ್ತಡ ಇದೆ. ಅವರು ರಾಜೀನಾಮೆ ಕೊಟ್ಟರೆ ಅದು ಯಾರ‍್ಯಾರ ಬುಡಕ್ಕೆ ಬರುತ್ತದೋ ಗೊತ್ತಿಲ್ಲ. ಹಾಗಾಗಿ ಅವರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ- ಜೆಡಿಎಸ್ ನಿನ್ನೆ ಅಹೋರಾತ್ರಿ ಧರಣಿ ಮಾಡಿದ್ದೇವೆ. ಇವತ್ತು ಕೂಡ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು.

