ಮಂಡ್ಯ: ದೇವರ ಪೂಜೆಗೆಂದು ಬಂದ ಭಕ್ತ ಮಹಾಶಯನೊಬ್ಬ ಮಂಗಳಾರತಿ ತಟ್ಟೆಯಲ್ಲಿದ್ದ ಹಣಕ್ಕೆ ಆಸೆಬಿದ್ದು ದೇವರನ್ನೇ ಮರೆತು ಹಣ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂರು ದಿನಗಳ ಹಿಂದೆ ಮಂಡ್ಯ ಜಿಲ್ಲೆ, ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭಕ್ತಮಹಾಶಯನೊಬ್ಬ ಬಂದಿದ್ದಾನೆ. ದೇವರಿಗೆ ಕೈಮುಗಿಯಲು ನಿಂತ ಭಕ್ತನಿಗೆ ಪಕ್ಕದಲ್ಲೇ ಇದ್ದ ಮಂಗಳಾರತಿ ತಟ್ಟೆ ಕಣ್ಣಿಗೆ ಬಿದ್ದಿದೆ. ಅಷ್ಟಕ್ಕೆ ಭಕ್ತ ಮಹಾಶಯನ ಭಕ್ತಿ ಹಾರಿ ಹೋಗಿ ತನ್ನ ಸುತ್ತಮುತ್ತ ಯಾರಾದರೂ ಇದ್ದಾರ ಅಂತಾ ಗಮನಿಸಿದ್ದಾನೆ. ಬಳಿಕ ದೇವರಲ್ಲಿ ಬೇಡಿಕೊಳ್ಳುವವನ ರೀತಿ ಮಂಗಳಾರತಿ ತಟ್ಟೆ ಬಳಿ ಕುಳಿತಿದ್ದಾನೆ. ತನ್ನನ್ನು ಯಾರೂ ನೋಡುತ್ತಿಲ್ಲ ಎಂದು ಖಾತ್ರಿಯಾದ ನಂತರ ಮಂಗಳಾರತಿ ತಟ್ಟೆಯಲ್ಲಿದ್ದ ಐನೂರು ರೂಪಾಯಿ ನೋಟು ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಭಕ್ತ ಮಹಾಶಯನ ಕೃತ್ಯ ದೇವಾಲಯದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೆಯಾದ್ಯಂತ ವಿಡಿಯೋ ವೈರಲ್ ಆಗಿದೆ.
https://www.youtube.com/watch?v=Wv1R74u0OC8&feature=youtu.be

