ಈ ಬಾರಿ `ಬಿಗ್ ಬಾಸ್ ಸೀಸನ್-13 ರಲ್ಲಿ (BBK 13) `ಅಗ್ನಿಪರೀಕ್ಷೆ’ ಎಂಬ ವಿಶೇಷ ಸ್ಪರ್ಧೆಯನ್ನ ದಾಟಿ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡಬೇಕು. ಸಾಮಾನ್ಯ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆಯೇ ಅಗ್ನಿಪರೀಕ್ಷೆ. ಈ ಪ್ರಕ್ರಿಯೆಗೂ ಮುನ್ನ ಲಕ್ಷಾಂತರ ಮಂದಿ ಆಡಿಷನ್‌ನಲ್ಲಿ ಭಾಗವಹಿಸಿದ್ದು, ಅವರಲ್ಲಿ 60 ಮಂದಿಯನ್ನ ಶಾರ್ಟ್‌ಲಿಸ್ಟ್ ಮಾಡಿ, ಮುಂದಿನ ಹಂತದ ʻಅಗ್ನಿಪರೀಕ್ಷೆʼಗೆ ಆಯ್ಕೆ ಮಾಡಲಾಗಿದೆ.
ವಿಭಿನ್ನ ಪ್ರತಿಭೆ, ವ್ಯಕ್ತಿತ್ವ ಮತ್ತು ಆಸಕ್ತಿದಾಯಕ ಸ್ಪರ್ಧಿಗಳನ್ನ ಗುರುತಿಸುವ ಮೂಲಕ ಈ ಪ್ರಕ್ರಿಯೆ ಕುತೂಹಲ ಮೂಡಿಸಿದೆ. ಈ ವಿಶೇಷ ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರು ಗಮನ ಸೆಳೆಯುವ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯ 72 ವರ್ಷದ ರತ್ನಾ ಹಾಗೂ 20 ವರ್ಷದ ಕುಮಾರಿ `ಬಿಗ್ ಬಾಸ್’ನ `ಸ್ಟಾರ್ ಕಂಟೆಸ್ಟಂಟ್’ಗಳಾಗಿ (Bigg Boss Contestants) ಆಯ್ಕೆಯಾಗಿದ್ದಾರೆ.

72 ವರ್ಷದ ರತ್ನ ಈ ಇಳಿ ವಯಸ್ಸಿನಲ್ಲೂ ತೋರುತ್ತಿರುವ ಉತ್ಸಾಹ ಮತ್ತು ಚೈತನ್ಯದಿಂದ ಆಯ್ಕೆಯಾಗಿದ್ದಾರೆ. ಇವರ ಉತ್ಸಾಹವನ್ನು ಮೆಚ್ಚಿದ ಅಗ್ನಿಪರೀಕ್ಷೆ ಜಡ್ಜ್‌ಗಳಲ್ಲಿ ಒಬ್ಬರಾದ ವಿನಯ್ ಗೌಡ ಈ ವೃದ್ಧೆ ಸ್ಪರ್ಧಿಗೆ `ಬಂಗಾರಪೇಟೆ ಆನೆ’ ಎಂಬ ಬಿರುದನ್ನೂ ನೀಡಿದ್ದಾರೆ.
ಬಿಗ್‌ಬಾಸ್ ಈ ಸೀಸನ್‌ಗೆ ಕಾಮನ್ ಮ್ಯಾನ್ ಲಿಸ್ಟ್‌ನಲ್ಲಿ ಆಯ್ಕೆಯಾದ ಇನ್ನೋರ್ವ ಸ್ಪರ್ಧಿ 20 ವರ್ಷದ ಕುಮಾರಿ. ಹಳ್ಳಿ ಪ್ರತಿಭೆ ಕುಮಾರಿಯವರ ಮುಗ್ಧತೆ ಮತ್ತು ಸಹಜ ವ್ಯಕ್ತಿತ್ವವೇ ಅವರ ವಿಶೇಷತೆಯಾಗಿ ಗುರುತಿಸಲ್ಪಟ್ಟಿದೆ. ಹೀಗಾಗಿ ಬಿಗ್‌ಬಾಸ್‌ಗೆ ಆಯ್ಕೆಯಾಗಿದ್ದಾರೆ. ʻಅಗ್ನಿಪರೀಕ್ಷೆʼ ಆಡಿಷನ್‌ಗೆ ಯಾವುದೇ ವಯಸ್ಸಿನ ಮಿತಿಯಿರಲಿಲ್ಲ. ಹೀಗಾಗಿ 72 ವರ್ಷದ ರತ್ನ ಉತ್ಸಾಹ ಹಾಗೂ ಯುವ ಪೀಳಿಗೆಯನ್ನು ಪ್ರತಿನಿಧಿಸುವ 20 ವರ್ಷದ ಕುಮಾರಿ ಅಗ್ರೆಸ್ಸಿವ್ ವ್ಯಕ್ತಿತ್ವದ ಮೂಲಕ `ಬಿಗ್ ಬಾಸ್’ ವೇದಿಕೆಯಲ್ಲಿ ವಿಭಿನ್ನ ವಯೋಮಾನದ ಜನರಿಗೂ ಅವಕಾಶವಿದೆ ಅನ್ನೋದನ್ನ ತೋರಿಸಲೆಂದೇ ಆಯ್ಕೆ ಮಾಡಿದಂತಿದೆ.

ಸಾಮಾನ್ಯರ ಸ್ಪರ್ಧೆಯಲ್ಲಿ ಇವರು ಗೆದ್ದಿದ್ದರೂ ಬಳಿಕ ಸೆಲೆಬ್ರಿಟಿಗಳೊಂದಿಗೆ ಇವರು ಹೇಗೆ ಸರ್ವೈವ್ ಆಗ್ತಾರೆ ಅನ್ನೋದೇ ಕುತೂಹಲ. ಮನರಂಜನೆ ಜೊತೆ ಕಠಿಣ ಸ್ಪರ್ಧೆಯಲ್ಲಿ ಭಾಗವಹಿಸಬೇಕಿರುವುದು ಬಿಗ್‌ಬಾಸ್ ಮನೆಯ ಆಟದ ರೂಲ್ಸ್. ಇವುಗಳನ್ನೆಲ್ಲಾ ಸಾಮಾನ್ಯ ಸ್ಪರ್ಧಿಗಳು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನ ನೋಡುವ ಕುತೂಹಲ ಬಿಗ್‌ಬಾಸ್ ಪ್ರಿಯರದ್ದು.

