– 6 ಮಂಟಪಗಳಲ್ಲಿ 444 ಜೋಡಿಗೆ ಕಲ್ಯಾಣ
ತಿರುವನಂತಪುರಂ (ತ್ರಿಶೂರ್): ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ (Guruvayur Temple) ಭಾನುವಾರ (ಇಂದು) ಒಂದೇ ದಿನ ಬರೋಬ್ಬರಿ 444 ಮದುವೆಗಳು ನಡೆದಿದೆ. ಇದು ದೇವಸ್ಥಾನದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.
ಇದಕ್ಕೂ ಮುನ್ನ 2024ರ ಸೆಪ್ಟೆಂಬರ್ 8 ರಂದು ಒಂದೇ ದಿನ 344 ಮದುವೆಗಳು (Weddings) ನಡೆದಿದ್ದು, ಇದುವರೆಗಿನ ದಾಖಲೆಯಾಗಿತ್ತು. ಆ ದಾಖಲೆ ಇಂದು ಮುರಿದಿದೆ.

ಬೆಳಗ್ಗೆ 4 ಗಂಟೆಯಿಂದಲೇ ಮದುವೆ ಸಂಭ್ರಮ
444 ವಿವಾಹ ಮಹೋತ್ಸವದ ಹಿನ್ನೆಲೆ ದೇವಸ್ಥಾನದಲ್ಲಿ 6 ವಿವಾಹ ಮಂಟಪಗಳನ್ನ (Wedding Mandapams) ಸಿದ್ಧಪಡಿಸಲಾಗಿತ್ತು. ಬೆಳಗ್ಗೆ 4 ಗಂಟೆಯಿಂದಲೇ ವಿವಾಹ ಕಾರ್ಯಕ್ರಮಗಳು ಜರುಗತೊಡಗಿದ್ದವು. ಸಾಂಪ್ರದಾಯಿಕ ಸಂಗೀತವನ್ನೂ ಏರ್ಪಾಡು ಮಾಡಲಾಗಿತ್ತು. ಭಾರೀ ಸಂಖ್ಯೆಯ ಭಕ್ತರು ಹಾಗೂ ವಿವಾಹ ಪಕ್ಷದವರು ಆಗಮಿಸಿದ್ದರಿಂದ ದೇವಸ್ಥಾನದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ವಿವಾಹ ಪಕ್ಷದವರಿಗೆ ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿ ನಿಯೋಜಿತ ಕೌಂಟರ್‌ಗಳಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು ಎಂದು ಮಂಡಳಿಯ ಅಧ್ಯಕ್ಷ ಎ.ವಿ. ಗೋಪಿನಾಥ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಒಂದು ವಿವಾಹ ಕಾರ್ಯಕ್ರಮಕ್ಕೆ ವಧು, ವರ, ಆಪ್ತ ಸಂಬಂಧಿಕರು ಹಾಗೂ ಫೋಟೋಗ್ರಾಫರ್ ಸೇರಿ ಒಟ್ಟು 24 ಮಂದಿಗೆ ಮಾತ್ರವೇ ಪ್ರವೇಶ ಅವಕಾಶ ನೀಡಲಾಗಿತ್ತು.
ಆಧಾರ್ ಕಡ್ಡಾಯ
ದಂಪತಿಗಳು ವಿವಾಹದ ಬುಕಿಂಗ್ ದಾಖಲೆ ಹಾಗೂ ವಧು-ವರರ ಆಧಾರ್ ಕಾರ್ಡ್‌ಗಳನ್ನ ಕೌಂಟರ್‌ನಲ್ಲಿ ಹಾಜರುಪಡಿಸಬೇಕಿತ್ತು. ಮಂಗಳಸೂತ್ರ ಕಟ್ಟುವ ವೇಳೆ ವಧು-ವರರ ಜೊತೆಗೆ ಅವರ ಪೋಷಕರು ಹಾಗೂ ಕುಟುಂಬ ಸದಸ್ಯರು ಸೇರಿದಂತೆ 5 ಅಥವಾ 6 ಮಂದಿಗೆ ಮಾತ್ರ ಕತಿರ್ಮಂಟಪ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ವಿವಾಹ ಮುಗಿದ ಬಳಿಕ ನವದಂಪತಿಗಳು ಹಾಗೂ ಕುಟುಂಬಸ್ಥರು ದೀಪಸ್ತಂಭದ ದಕ್ಷಿಣ ಭಾಗದ ಮೂಲಕ ದಕ್ಷಿಣ ವಾಕ್‌ವೇಗೆ ಮರಳಬೇಕಿತ್ತು ಎಂದು ದೇವಸ್ಥಾನ ಆಡಳಿತ ಮಂಡಳಿ ಸೂಚಿಸಿತ್ತು.

100 ಹೆಚ್ಚು ಪೊಲೀಸರ ಭದ್ರತೆ
ಇನ್ನೂ ಭಾನುವಾರದ ವಿವಾಹ ಸಮಾರಂಭದ ವ್ಯವಸ್ಥೆಗಳ ಕುರಿತು ಶನಿವಾರವೇ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ದೇವಸ್ಥಾನದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಉಪ ಆಡಳಿತಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗುರುವಾಯೂರು ಎಸಿಪಿ ಸುರೇಂದ್ರನ್ ಮಾಂಗಾಡ್ ಅವರ ಸಮ್ಮುಖದಲ್ಲಿ ಸುಮಾರು 100ಕ್ಕೂ ಹೆಚ್ಚು ಪೊಲೀಸರ ಭದ್ರತೆಯನ್ನೂ ನಿಯೋಜಿಸಲಾಗಿತ್ತು.

444 ಜೋಡಿಗೆ ಬರೋಬ್ಬರಿ 1,000 ತುಳಸಿ ಮಾಲೆ!
444 ವಿವಾಹಗಳ ಹಿನ್ನೆಲೆ ವಧು-ವರರಿಗೆ ಸುಮಾರು 1,000 ತುಳಸಿ ಮಾಲೆಗಳ ವ್ಯವಸ್ಥೆ ಮಾಡಲಾಗಿತ್ತು. ತಿರುವೆಂಗಿಡಂ ವಾರಿಯಂನ ರಾಜಶೇಖರನ್ ವಾರಿಯರ್ ಅವರ ಮೇಲ್ವಿಚಾರಣೆಯಲ್ಲಿ ಶ್ಯಾಮ್ ಸುಂದರ್, ಉಣ್ಣಿಕೃಷ್ಣ ವಾರಿಯರ್, ಮೋಹನ ಪಿಶಾರೋಡಿ, ಬಾಲಕೃಷ್ಣ ಪಿಶಾರೋಡಿ ಹಾಗೂ ಪ್ರಸನ್ನ ಉಣ್ಣಿಕೃಷ್ಣನ್ ಅವರು ತುಳಸಿ ಮಾಲೆಗಳನ್ನ ಸಿದ್ಧಪಡಿಸಿದ್ದರು. ಇದಕ್ಕಾಗಿ ತಮಿಳುನಾಡಿನಿಂದ ಸುಮಾರು 500 ಕೆಜಿ ತುಳಸಿ ಎಲೆಗಳನ್ನ ತರಿಸಲಾಗಿತ್ತು.

