ಕೀವ್: ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ ರಾತ್ರಿ ಪೂರ್ತಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ 42 ಜನ ಗಾಯಗೊಂಡಿದ್ದಾರೆ. ಕನಿಷ್ಠ 50 ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ದಾಳಿಯ ತೀವ್ರತೆಗೆ ಮನೆಗಳು ಮತ್ತು ರೆಸ್ಟೋರೆಂಟ್ ಹೊತ್ತಿ ಉರಿದಿದೆ. ದಾಳಿಗೊಳಗಾದ ಬುಚಾ ಜಿಲ್ಲೆಯ ಪ್ರದೇಶದಿಂದ 380ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ಟೈಮೂರ್ ಟ್ಕಾಚೆಂಕೊ ಅವರು ಟೆಲಿಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಭಾರತೀಯ ಬಿಲಿಯನೇರ್ ಕಾರ್ಖಾನೆ ಮೇಲೆ ರಷ್ಯಾ ದಾಳಿ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ದಾಳಿಯಿಂದ ಮೂಲಸೌಕರ್ಯಗಳಿಗೆ ಗಮನಾರ್ಹ ಹಾನಿಯುಂಟಾಗಿದೆ. ಇದರಲ್ಲಿ ವಸತಿ ಕಟ್ಟಡಗಳು, ಗೋಡೌನ್‌ಗಳು ಮತ್ತು ವೃದ್ಧರ ಆರೈಕೆ ಕೇಂದ್ರಗಳು ಸೇರಿವೆ. ಈ ಹಾನಿಗೆ ಕಾರಣರಾದವರು, ನಿರ್ಲಕ್ಷ್ಯ ತೋರಿದವರಿಗೆ ಶಿಕ್ಷೆ ವಿಧಿಸಲಾಗುವುದು. ಈಗಾಗಲೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ಕೀವ್ ನಿರಂತರ ವೈಮಾನಿಕ ದಾಳಿಗಳನ್ನು ಎದುರಿಸುತ್ತಿದೆ. ರಷ್ಯಾದ ವಾಯುದಾಳಿಗಳು ಉಕ್ರೇನಿಯನ್ ರಾಜಧಾನಿಯಲ್ಲಿ ಆರ್ಥಿಕತೆಯನ್ನು ಉಸಿರುಗಟ್ಟಿಸಿವೆ. ದಾಳಿಗಳಿಂದಾಗಿ ನಾಗರಿಕ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ವರದಿಯಾಗಿದೆ.
ಆ.17 ರಂದು ಉಕ್ರೇನ್‌ನ ಅತಿದೊಡ್ಡ ಸಂಯೋಜಿತ ಉಕ್ಕಿನ ಘಟಕ ಕ್ರಿವಿ ರಿಹ್‌ನಲ್ಲಿರುವ ಭಾರತೀಯ ಮೂಲದ ಬಿಲಿಯನೇರ್ ಲಕ್ಷ್ಮಿ ಮಿತ್ತಲ್ ಅವರ ಆರ್ಸೆಲರ್ ಮಿತ್ತಲ್ ಗಣಿಗಾರಿಕೆ ಮತ್ತು ಲೋಹಶಾಸ್ತ್ರ ಸಂಕೀರ್ಣವು ರಷ್ಯಾದ ಕ್ಷಿಪಣಿ ದಾಳಿಗೆ ಒಳಗಾಗಿತ್ತು. ಉಕ್ರೇನಿಯನ್ ಡ್ರೋನ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 14 ಕಾರ್ಮಿಕರು ಗಾಯಗೊಂಡಿದ್ದರು. ಕೋರ್ ಎನರ್ಜಿ ಮತ್ತು ಬ್ಲಾಸ್ಟ್-ಫರ್ನೇಸ್‌ಗಳಿಗೆ ಹಾನಿಯಾದ ನಂತರ ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಹಡಗಿನ ಮೇಲೆ ರಷ್ಯಾ ದಾಳಿ; ಕಾಸರಗೋಡು ಮೂಲದ ವ್ಯಕ್ತಿ ಸೇರಿ ನಾಲ್ವರು ಭಾರತೀಯರ ಸಾವು
