ಶ್ರೀನಗರ: ನಿಷೇಧಿತ ಸ್ಯಾಟಲೈಟ್ ಫೋನ್ (Satellite Phone) ಹೊಂದಿದ್ದ ಇಬ್ಬರು ಅಮೆರಿಕನ್ ಪ್ರಜೆಗಳನ್ನು(Americans) ಜಮ್ಮು ಕಾಶ್ಮೀರದ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Srinagar Airport) ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆಯಲಾದವರಲ್ಲಿ ಒಬ್ಬರನ್ನು ಮೊಂಟಾನಾ ಮೂಲದ ಜೆಫ್ರಿ ಸ್ಕಾಟ್ ಎಂದು ಗುರುತಿಸಲಾಗಿದೆ. ಇವರ ಬ್ಯಾಗೇಜ್‌ನಲ್ಲಿ ಗಾರ್ಮಿನ್ (Garmin) ಕಂಪನಿಯ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ.
ವಿಮಾನ ನಿಲ್ದಾಣದ ಭದ್ರತೆಗೆ ನಿಯೋಜನೆಗೊಂಡಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಇವರನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿ, ಹೆಚ್ಚಿನ ತನಿಖೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವ್ಯಕ್ತಿಗಳು ಈ ಹಿಂದೆ ರಿಷಿಕೇಶದಲ್ಲಿ ತಂಗಿದ್ದು, ಅಲ್ಲಿಂದ ಶ್ರೀನಗರಕ್ಕೆ ಬಂದಿದ್ದರು ಎನ್ನಲಾಗಿದೆ.
ಈ ಸಾಧನವು ನೇರವಾಗಿ ಉಪಗ್ರಹದ ಮೂಲಕ ಸಂವಹನ ನಡೆಸುವುದರಿಂದ ಸಾಮಾನ್ಯ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲೂ ಕೆಲಸ ಮಾಡುತ್ತದೆ. ಇದನ್ನೂ ಓದಿ: ಜನ ಸಾಮಾನ್ಯರು ಸ್ಯಾಟಲೈಟ್ ಫೋನ್ ಖರೀದಿಸಬಹುದೇ?
ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಸಾಧನಗಳ ಬಳಕೆಯನ್ನು ಭದ್ರತಾ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ವ್ಯಕ್ತಿಗಳು ಅರಿವಿಲ್ಲದೆ ಇದನ್ನು ತಂದಿದ್ದಾರೆಯೇ ಅಥವಾ ಬೇರೆ ಉದ್ದೇಶವಿದೆಯೇ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿದೇಶಿ ಪ್ರವಾಸಿಗರು ಭಾರತಕ್ಕೆ ಬರುವಾಗ ಇಂತಹ ಸಂವಹನ ಸಾಧನಗಳನ್ನು ತರಬಾರದೆಂದು ಭಾರತೀಯ ರಾಯಭಾರ ಕಚೇರಿಗಳು ಮತ್ತು ಪರಿಸರ ಇಲಾಖೆಗಳು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇರುತ್ತವೆ. ಒಂದು ವೇಳೆ ತುರ್ತು ಸಂದರ್ಭಕ್ಕಾಗಿ ತರಲೇಬೇಕಿದ್ದರೆ ಭಾರತದ ಟೆಲಿಕಾಂ ಇಲಾಖೆಯಿಂದ (DoT) ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯ.

