ಗದಗ: ‘ಪ್ರಜಾ ಸೌಧ’ ಎಂಬ ಹೆಸರಿನ ಗದಗ ತಾಲೂಕು ಆಡಳಿತ ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಗದಗ ತಹಶೀಲ್ದಾರ್ ಕಚೇರಿ ಸದ್ಯ 125 ವರ್ಷಗಳಷ್ಟು ಹಳೆಯ ಪಾರಂಪರಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಟ್ಟಡ ಗಟ್ಟಿಯಾಗಿದ್ದರೂ ಮೇಲ್ಛಾವಣಿ, ಹಂಚುಗಳು ಸೇರಿದಂತೆ ಹಲವು ಭಾಗಗಳು ಸಂಪೂರ್ಣ ಶಿಥಿಲಗೊಂಡಿವೆ. ಹೀಗಾಗಿ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸ ಕಟ್ಟಡ ನಿರ್ಮಾಣಕ್ಕಾಗಿ ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿ 8 ತಿಂಗಳು ಕಳೆದರೂ ಪ್ರಜಾಸೌಧದ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು 16 ಕೋಟಿ ರೂಪಾಯಿ ಅನುದಾನವೂ ಬಿಡುಗಡೆಯಾಗಿದೆ. ಆದರೂ ಕಾಮಗಾರಿಗೆ ಮಾತ್ರ ಗ್ರಹಣ ಹಿಡಿದಂತಾಗಿದೆ. ಇದನ್ನೂ ಓದಿ: ಐಫೋನ್ EMI ವಿಚಾರಕ್ಕೆ ಕುಟುಂಬ ದುರಂತ ಅಂತ್ಯ?: ಮೃತ ಮಹಿಳೆಯ ಸಹೋದರಿ ಹೇಳಿದ್ದೇನು?
ಹಳೆಯ ಕಟ್ಟಡವನ್ನು ಧ್ವಂಸಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕಾದರೆ ತಹಶೀಲ್ದಾರ್ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಸೂಕ್ತ ಜಾಗ ಸಿಗುತ್ತಿಲ್ಲ. ಇದೂ ಕೂಡ ಹೊಸ ಕಟ್ಟಡ ನಿರ್ಮಾಣಕ್ಕೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
1902ರಲ್ಲಿ ನಿರ್ಮಾಣವಾದ ಈ ತಹಶೀಲ್ದಾರ್ ಕಚೇರಿಗೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ. ಮಳೆ ಬಂದಾಗ ಕಚೇರಿ ಒಳಗೆ ನೀರು ನುಗ್ಗಿ ಜಲಾವೃತವಾಗುತ್ತದೆ. ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಸಿಬ್ಬಂದಿಗೂ ಸೂಕ್ತ ಸುರಕ್ಷತೆ ಇಲ್ಲ.
ಗದಗ ನಗರದ ಹೃದಯಭಾಗದಲ್ಲಿರುವ ಈ ಕಚೇರಿ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತಾಗಿದೆ. ಹೀಗಾಗಿ ಹೊಸ ಪ್ರಜಾಸೌಧ ಯಾವಾಗ ನಿರ್ಮಾಣವಾಗಲಿದೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ಬಿಜೆಪಿಗೆ ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ; ಕೆಲವು ಮಹತ್ವದ ದಾಖಲೆ ಕೊಡ್ತೇವೆಂದ ಸಮಿತಿ ಸದಸ್ಯ ವೆಂಕಟೇಶ್
