ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ(Ram Mandir) ಭಕ್ತರು ಸಮರ್ಪಿಸಿದ ದೇಣಿಗೆ ಹಣ ಮತ್ತು ಚಿನ್ನಾಭರಣಗಳ ಕಳವಿಗೆ ಸಂಬಂಧಿಸಿದಂತೆ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳಲ್ಲಿ 105 ಬಾರಿ ಕಳ್ಳತನದ ದೃಶ್ಯಗಳು ಸೆರೆಯಾಗಿವೆ ಎಂಬ ಆಘಾತಕಾರಿ ಅಂಶವನ್ನು ವಿಶೇಷ ತನಿಖಾ ತಂಡ(SIT) ಸುಪ್ರೀಂ ಕೋರ್ಟ್‌ಗೆ(Supreme Court) ತಿಳಿಸಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಸ್‌ಐಟಿ ಸಿದ್ಧಪಡಿಸಿರುವ ಪ್ರಗತಿ ವರದಿಯ ವಿವರಗಳನ್ನು ಇಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರು. ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 25ರೊಳಗೆ ದೋಷಾರೋಪ ಪಟ್ಟಿ(Charge Sheet) ಸಲ್ಲಿಸಲಾಗುವುದು ಎಂದು ಮೆಹ್ತಾ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವಂತೆ ಮ್ಯಾಜಿಸ್ಟ್ರೇಟ್‌ಗೆ ನ್ಯಾಯಾಲಯ ಸೂಚಿಸಿದೆ.
ಕಾಣಿಕೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಲ್ಲಿಸಿದ ಸ್ಥಿತಿಗತಿ ವರದಿಯನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಪರಿಶೀಲಿಸಿತು. ತನಿಖೆಯ ವೇಳೆ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆಗಳು ಹಾಗೂ ಇದುವರೆಗೆ ಬಂಧಿಸಲಾದ ಆರೋಪಿಗಳ ವಿವರಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ಆರೋಪಿಗಳನ್ನು ಗುರುತಿಸಲಾಗಿದ್ದು, ಈ ಎಲ್ಲಾ ಮಾಹಿತಿಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.
ದೇವಸ್ಥಾನದಲ್ಲಿ ಭಕ್ತರು ನೀಡುವ ಬೆಲೆಬಾಳುವ ವಸ್ತುಗಳಿಗೆ ಸಾಫ್ಟ್‌ವೇರ್ ಮೂಲಕ ರಸೀದಿ ನೀಡಲಾಗುತ್ತಿದ್ದು, ಆ ವಸ್ತುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ವಿಚಾರಣೆ ವೇಳೆ ಅರ್ಜಿದಾರರು ಎಸ್‌ಐಟಿ ವರದಿಯ ಪ್ರತಿಯನ್ನು ತಮಗೆ ನೀಡಬೇಕೆಂದು ಮನವಿ ಮಾಡಿದರು. ಆದರೆ ಸುಪ್ರೀಂ ಕೋರ್ಟ್ ಈ ಕೋರಿಕೆಯನ್ನು ತಿರಸ್ಕರಿಸಿತು. ಪ್ರಕರಣದ ಪ್ರಕ್ರಿಯೆಯನ್ನು ಸೆಷನ್ಸ್ ನ್ಯಾಯಾಧೀಶರ ವ್ಯಾಪ್ತಿಯಿಂದ ಹೊರತೆಗೆಯಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ಮುಂದಿನ ತನಿಖೆಯ ಅಗತ್ಯ ಕಂಡುಬಂದರೆ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿತು.
ಈ ವರ್ಷದ ಆರಂಭದಲ್ಲಿ ಕಾಣಿಕೆ ಕಳವು ಪ್ರಕರಣ ಭುಗಿಲೆದ್ದ ಬೆನ್ನಲ್ಲೇ, ರಾಮ ಮಂದಿರ ಟ್ರಸ್ಟ್‌ನ ಪ್ರಮುಖ ಪದಾಧಿಕಾರಿಗಳಾಗಿದ್ದ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿತ್ತು. ಬಳಿಕ ಟ್ರಸ್ಟ್‌ನ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಸಿಇಒ ನೇತೃತ್ವದ ಆಡಳಿತ ಮಾದರಿಯನ್ನು ಜಾರಿಗೆ ತರಲಾಗಿದ್ದು, ಮಾಜಿ ಸೇನಾ ಅಧಿಕಾರಿ ಜಿತೇಂದ್ರ ಮಿಶ್ರಾ ಅವರನ್ನು ನೂತನ ಸಿಇಒ ಆಗಿ ನೇಮಿಸಲಾಗಿದೆ.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವ ಮುನ್ನವೇ, ಟ್ರಸ್ಟ್‌ನ ಕೋರಿಕೆಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಜೂನ್ 13 ರಂದು ಲಕ್ನೋ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಎಸ್‌ಐಟಿ ರಚಿಸಿತ್ತು. ಈ ಸಮಿತಿಯು ಜೂನ್ 23 ರಂದೇ ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿ, ಕಠಿಣ ಕ್ರಮಗಳಿಗೆ ಶಿಫಾರಸು ಮಾಡಿತ್ತು.
ಪ್ರಕರಣ ಸಂಬಂಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ ಮಿಶ್ರಾ, ಲವಕುಶ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ, ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಮತ್ತು ಇತರ ಅಪರಿಚಿತರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಇವರೆಲ್ಲರನ್ನೂ ಈಗಾಗಲೇ ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

