ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ(B Nagendra) ಅವರ ರಾಜೀನಾಮೆ ಆಗ್ರಹಿಸಿ ಹಾಗೂ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ರಾಜ್ಯ ಬಿಜೆಪಿ(BJP) ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿದೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಬಿ. ಶ್ರೀರಾಮುಲು(B. Sriramulu), ಪಾದಯಾತ್ರೆಯ ರೂಪುರೇಷೆಗಳ ಬಗ್ಗೆ ಪಕ್ಷದ ಮಟ್ಟದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಧಿಕೃತ ದಿನಾಂಕ ಮತ್ತು ವಿವರಗಳನ್ನು ಘೋಷಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಪ್ಲ್ಯಾನ್ ಏನು?
ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದಿಂದ ಆರಂಭವಾಗಲಿರುವ ಪಾದಯಾತ್ರೆಯು ಬಳ್ಳಾರಿಯವರೆಗೆ ಸಾಗಲಿದ್ದು, ಸುಮಾರು 170 ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಿರಲಿದೆ. ಈ ಯಾತ್ರೆಯು ಒಟ್ಟು 20 ದಿನಗಳ ಕಾಲ ನಡೆಯಲಿದ್ದು, ಮುಂದಿನ ವಾರಾಂತ್ಯದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲು ಸಿದ್ಧತೆಗಳು ನಡೆದಿವೆ.
ಜಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರು ಸೇರಿದಂತೆ ರಾಜ್ಯದ ಪ್ರಮುಖ ಮುಖಂಡರು ಭಾಗವಹಿಸಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ.
ಇಡೀ 170 ಕಿ.ಮೀ ಉದ್ದದ ಪಾದಯಾತ್ರೆಯ ಸಂಪೂರ್ಣ ಸಂಘಟನೆ ಮತ್ತು ಉಸ್ತುವಾರಿಯನ್ನು ಮಾಜಿ ಸಚಿವ ಶ್ರೀರಾಮುಲು ಅವರೇ ವಹಿಸಿಕೊಳ್ಳಲಿದ್ದಾರೆ.
ರಾಜಕೀಯ ಲೆಕ್ಕಾಚಾರವೇನು?
ಜಗಳೂರಿನಿಂದ ಬಳ್ಳಾರಿಯವರೆಗಿನ ಈ ಪಾದಯಾತ್ರೆಯ ಮಾರ್ಗದಲ್ಲಿ ಸುಮಾರು 11 ಮೀಸಲು ವಿಧಾನಸಭಾ ಕ್ಷೇತ್ರಗಳು ಹಾದುಹೋಗಲಿವೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ವಿಚಾರವನ್ನು ನೇರವಾಗಿ ಶೋಷಿತ ಮತ್ತು ಪರಿಶಿಷ್ಟ ಸಮುದಾಯಗಳ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ, ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು ಹಾಗೂ ಈ ಕ್ಷೇತ್ರಗಳಲ್ಲಿ ಪಕ್ಷದ ರಾಜಕೀಯ ಬಲವರ್ಧನೆ ಮಾಡುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

