– ಅಮರಾವತಿ, ಬೆಂಗಳೂರು ಮತ್ತು ಚೆನ್ನೈ ಸಂಪರ್ಕಿಸುವ ಬುಲೆಟ್ ರೈಲು ಮಾರ್ಗದ ಬಗ್ಗೆ ಪ್ರಸ್ತಾಪ
ಹೈದರಾಬಾದ್: 2047ರ ವೇಳೆ ದಕ್ಷಿಣದ ಆರ್ಥಿಕತೆಯು (Southern Economy) 10 ಟ್ರಿಲಿಯನ್ ಡಾಲರ್ (837 ಲಕ್ಷ ಕೋಟಿ ರೂ.) ತಲುಪಬಹುದು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮಾತನಾಡಿರುವ ಅವರು, 2047ರ ವೇಳೆ ದಕ್ಷಿಣದ ಆರ್ಥಿಕತೆ ವೃದ್ಧಿಸಲಿದೆ, ಅದಕ್ಕಾಗಿ ಈ ಭಾಗದ ರಾಜ್ಯಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದು ಕೋರಿದ್ದಾರೆ.

ದಕ್ಷಿಣ ರಾಜ್ಯಗಳು ಭಾರತದ ಜಿಡಿಪಿಗೆ (GDP) ಸುಮಾರು 31% ಕೊಡುಗೆ ನೀಡುತ್ತಿವೆ. ವಿಕಿಸತ ಭಾರತ ನಿರ್ಮಿಸುವಲ್ಲಿ ಪ್ರಮುಖ ಆರ್ಥಿಕ ಶಕ್ತಿಗಳಾಗಿವೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರ ಸಮ್ಮುಖದಲ್ಲಿ ಕೇಂದ್ರ ಸರ್ಕಾರಕ್ಕೆ ತಮ್ಮ ರಾಜ್ಯದ ಬೇಡಿಕೆಗಳನ್ನು ಸಲ್ಲಿಸಿದರು. ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ-ರಾಜ್ಯ ನಂಬಿಕೆ ಮತ್ತು ಪರಸ್ಪರ ಸಹಕಾರ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ದಕ್ಷಿಣ ರಾಜ್ಯಗಳ ತ್ವರಿತ ಅಭಿವೃದ್ಧಿಯನ್ನು ಉಲ್ಲೇಖಿಸಿ ಮಾತನಾಡಿ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳನ್ನು ಸಂಪರ್ಕಿಸುವ ಬುಲೆಟ್-ಟ್ರೈನ್ ಕಾರಿಡಾರ್ (bullet-train corridor) ಅನ್ನು ಪ್ರಸ್ತಾಪಿಸಿದರು. ಅವರು ತಮ್ಮ ತವರು ಕ್ಷೇತ್ರವಾದ ಕುಪ್ಪಂ ಮೂಲಕ ಬುಲೆಟ್ ರೈಲು ಸಂಚಾರ ಕಲ್ಪಿಸಲು ಸೂಚಿಸಿದರು. ಜೊತೆಗೆ ಅಮರಾವತಿ, ಬೆಂಗಳೂರು ಮತ್ತು ಚೆನ್ನೈ ಅನ್ನು ಸಂಪರ್ಕಿಸುವ ಮಾರ್ಗದ ಬಗ್ಗೆಯೂ ಪ್ರಸ್ತಾಪಿಸಿದರು.

