– ಸಿಡಬ್ಲ್ಯೂಆರ್‌ಸಿ ಆದೇಶ ಎತ್ತಿಹಿಡಿದ CWMA
ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತವಾಗಿದೆ. ರಾಜ್ಯದ ಅಧಿಕಾರಿಗಳ ಪ್ರಬಲ ವಾದದ ಹೊರತಾಗಿಯೂ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮಹತ್ವದ ಆದೇಶ ನೀಡಿದೆ.
ಈ ಮೂಲಕ ತಮಿಳುನಾಡಿಗೆ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ನೀರು ನಿಯಂತ್ರಣ ಸಮಿತಿ ಆದೇಶವನ್ನ ಎತ್ತಿಹಿಡಿದಿದೆ. ಅಧ್ಯಕ್ಷ ಎಸ್.ಕೆ. ಹಲ್ದಾರ್ ಅವರ ನೇತೃತ್ವದಲ್ಲಿ ಇಂದು ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ತಮಿಳುನಾಡಿನ ಅಧಿಕಾರಿಗಳು ವರ್ಚ್ಯುಯಲ್ ಮೂಲಕ ಭಾಗವಹಿಸಿದ್ದರು. ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಕೂಡ ವರ್ಚ್ಯುಯಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನವೇ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿತ್ತು. ಇದೀಗ CWMA ಕೂಡ ಅದೇ ಪ್ರಮಾಣದ ನೀರು ಹರಿಸಲು ಆದೇಶಿಸಿರುವುದು ಕರ್ನಾಟಕದಲ್ಲಿ ಕಾವೇರಿ ನೀರು ಹಂಚಿಕೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.
