ಲಂಡನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್(US-Iran) ನಡುವಿನ ಪರಸ್ಪರ ದಾಳಿಗಳು ತೀವ್ರಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ(Crude Oil Prices ) ಆರು ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ದರ ಶೇ. 1.5ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 97.73 ಡಾಲರ್‌ಗೆ(9,187 ರೂ.) ಮುಟ್ಟಿದೆ. ಇದು ಜುಲೈ 23ರ ನಂತರದ ಗರಿಷ್ಠ ದರವಾಗಿದೆ. ಅಮೆರಿಕದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ದರ ಶೇ.1.8ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 93.10 ಡಾಲರ್‌ಗೆ(8,797 ರೂ.) ತಲುಪಿದೆ.
ಅಮೆರಿಕದ ನೌಕಾಪಡೆಯ ಎರಡು ಯುದ್ಧನೌಕೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ನಂತರ, ಅಮೆರಿಕ ಸೇನೆಯು ಶನಿವಾರ ಇರಾನ್‌ನ ಮೂರು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿತ್ತು ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಈ ಹಡಗುಗಳು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಮತ್ತು ಅದರ ಪ್ರಾದೇಶಿಕ ಬೆಂಬಲಿಗರಿಗೆ ಹಣಕಾಸು ಒದಗಿಸುವ ಜಾಲಕ್ಕೆ ಸೇರಿದವು ಎಂದು ಅಮೆರಿಕ ಆರೋಪಿಸಿದೆ. ಇರಾನ್‌ನ ವಿದೇಶಾಂಗ ಸಚಿವಾಲಯವು ವಾಣಿಜ್ಯ ನೌಕೆಗಳ ಮೇಲಿನ ಈ ದಾಳಿಯನ್ನು ಯುದ್ಧ ಅಪರಾಧ ಮತ್ತು ಆರ್ಥಿಕ ಯುದ್ಧ ಎಂದು ಖಂಡಿಸಿದೆ.

ಇದರ ಬೆನ್ನಲ್ಲೇ, ನಮ್ಮ ಆಸ್ತಿಗಳ ಮೇಲೆ ದಾಳಿ ನಡೆಸಿದರೆ ನೀವು ಕೂಡ ದಾಳಿಗೆ ಒಳಗಾಗುತ್ತೀರಿ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೆರ್ ಖಾಲಿಬಾಫ್ ಎಕ್ಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಹಡಗುಗಳ ಮೇಲೆ ದಾಳಿ ಮಾಡಿದರೆ ಇರಾನ್‌ನ ತೈಲ ಟ್ಯಾಂಕರ್‌ಗಳನ್ನು ಹೊಡೆದುರುಳಿಸುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ನೀಡಿದ್ದ ಎಚ್ಚರಿಕೆಗೆ ಪ್ರತಿಯಾಗಿ ಈ ಹೇಳಿಕೆ ಹೊರಬಿದ್ದಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಸೆಕ್ಸ್ ಚಿತ್ರೋದ್ಯಮಕ್ಕೆ ಕಾನೂನು ಮಾನ್ಯತೆ!
ಕಳೆದ ಆಗಸ್ಟ್‌ನಲ್ಲಿ ಆರು ತಿಂಗಳು ಪೂರೈಸಿದ ಈ ಸಂಘರ್ಷವು ಸುಮಾರು ಒಂದು ತಿಂಗಳ ಶಾಂತಿಯ ನಂತರ ಮತ್ತೆ ಭುಗಿಲೆದ್ದಿದೆ. ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಗ್ಯಾಸೋಲಿನ್ ಮತ್ತು ಡೀಸೆಲ್ ಮುಂತಾದ ಇತರ ಇಂಧನಗಳ ಬೆಲೆಗಳೂ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿವೆ.
